ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಕೆ ಹೆಚ್ ಮುನಿಯಪ್ಪ ಅವರು ಇಂದು ದೇವನಹಳ್ಳಿಗೆ ಭೇಟಿ ನೀಡಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಚುನಾವಣೆ ನಂತರ ಮೊದಲ ಬಾರಿಗೆ ಭೇಟಿ ನೀಡಿದ ಮುನಿಯಪ್ಪ ಅವರನ್ನು ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಕೆ ಹೆಚ್ ಮುನಿಯಪ್ಪ ಅವರು ತಾಲೂಕು ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವನಹಳ್ಳಿ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ಮೊದಲನೇ ಹಂತದಲ್ಲೇ ರಾಜ್ಯದಲ್ಲಿ ನನ್ನನ್ನು ಮಂತ್ರಿಯಾಗಿ ತೆಗೆದುಕೊಂಡಿದೆ. ಸಚಿವರಾಗಿ ಮಾಡಿದಕ್ಕೆ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಇನ್ನೂ, ಮುಖಂಡರುಗಳ ಜೊತೆ ಮಾತನಾಡಿ, ದೇವನಹಳ್ಳಿಯ ಅಭಿವೃದ್ಧಿಯ ಕೆಲಸಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಈಗಾಗಲೇ ಐದು ಗ್ಯಾರಂಟಿಗಳಿಗೆ ಬಗ್ಗೆ ಮೊದಲ ಕ್ಯಾಬಿನೆಟ್ನಲ್ಲೇ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದು ಹೇಳಿದರು. ಸಚಿವ ಸಂಪುಟದಲ್ಲಿ ಯಾವ ಸ್ಥಾನದ ನಿರೀಕ್ಷೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವ ನಿರೀಕ್ಷೆಯೂ ಇಲ್ಲ. ಯಾವ ಸ್ಥಾನ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. ಸಚಿವ ಸಂಪುಟದಲ್ಲಿ ಕೆ ಹೆಚ್ ಮುನಿಯಪ್ಪ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮೊದಲನೇ ಬಾರಿಗೆ ದೇವನಹಳ್ಳಿಗೆ ಸಚಿವ ಸ್ಥಾನ ಸಿಕ್ಕಿದೆ.