ಹೊಸಕೋಟೆ: ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಬಿಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇವೆ ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಮ್ಮ ಕಚೇರಿಯಲ್ಲಿ ಬೆಂಬಲಿಗರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ಸರ್ಕಾರ ಎಂದು ಹೇಳುವುದಕ್ಕಿಂತ ಇದು ಜನರ ಸರ್ಕಾರ. ಮುಖ್ಯಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಜೊತೆ ನಿಲ್ಲುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಹೊಸಕೋಟೆ ಕ್ಷೇತ್ರದಲ್ಲಿ ಅನರ್ಹ ಶಾಸಕರನ್ನು ಸೋಲಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ. ಕ್ಷೇತ್ರದ ಹಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸ್ವತಂತ್ರ ಅಭ್ಯರ್ಥಿಯಾದ ನನಗೆ ಹನ್ನೊಂದು ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ಮಾಧ್ಯಮಗಳಲ್ಲಿ, ನನ್ನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.