ಹೊಸಕೋಟೆ:ಎಂಟಿಬಿ ನಾಗರಾಜ್ ಚುನಾವಣೆ ಹತ್ತಿರ ಬರುತಿದ್ದಂತೆ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದು, ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಗಣಗಲೂರು ಗ್ರಾಮದಲ್ಲಿ ಸ್ವಚ್ಛ ಭಾರತ್ ಅಭಿಯಾನ ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಿದರು.
ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಹೋಬಳಿಯ 30 ಕೆರೆಗಳಿಗೆ ಏತ ನೀರಾವರಿ ಯೋಜನೆ ಮುಖಾಂತರ ನೀರು ಹರಿಸುವ ಕಾಮಗಾರಿಗೆ ಅ . 28 ರಂದು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು. ಕೆ.ಸಿ ವ್ಯಾಲಿ , ಹೆಚ್ . ಎನ್ . ವ್ಯಾಲಿ , ನಾಲ್ಕನೇ ಹಂತದ ಕಾವೇರಿ ನೀರು ಹೊಸಕೋಟೆ ನಗರಕ್ಕೆ ಹರಿಸಲಾಗುವುದು . ರಾಜೀನಾಮೆ ಕೊಟ್ಟ ನಂತರ ಈಗಿನ ಮುಖ್ಯಮಂತ್ರಿಗಳು ನಮಗೆ ಸ್ಪಂದಿಸುತ್ತಿದ್ದಾರೆ. ನೀರಾವರಿ ಯೋಜನೆಗೆ ಮುಖ್ಯ ಮಂತ್ರಿಗಳಿಂದ ಚಾಲನೆ ನೀಡಿಸಿ 12 ತಿಂಗಳಲ್ಲಿ 30 ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಗಣಗಲೂರು ಗ್ರಾಮದಲ್ಲಿಸ್ವಚ್ಛ ಭಾರತ್ ಅಭಿಯಾನ ಮತ್ತು ಕಾರ್ಯಕರ್ತರ ಸಭೆ ನಡೆಸಿದ ಎಂಟಿಬಿ ಆದಾಯ ತೆರಿಗೆ ಕಟ್ಟದ ಹೋದರೆ ಅದು ದೇಶ ದ್ರೋಹವಾಗುತ್ತದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಲುವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇತರೆ ದೇಶಗಳು ನಮ್ಮ ದೇಶವನ್ನು ನೋಡುವಂತಹ ರೀತಿಯಾಗಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಸಹ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಮೆಚ್ಚಿ ಮಾತನಾಡಿದರು..
ಮಂತ್ರಿ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಿಖರ ಕಾರಣ ಇನ್ನೂ ಕೆಲವರಿಗೆ ತಿಳಿದಂತೆ ಇಲ್ಲ. ಇ ಡಿ . ಲೋಕಾಯುಕ್ತ ಹಾಗೂ ಇತರೆ ಯಾವುದೇ ಇಲಾಖೆಗೆ ಭಯ ಪಟ್ಟು ನಾನು ರಾಜೀನಾಮೆ ಕೊಟ್ಟಿಲ್ಲ. ಸರಕಾರಕ್ಕೆ ನಾನು ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತಿದ್ದೇನೆ . ಸ್ವಘೋಷಿತವಾಗಿಯೇ ನಾನು ನನ್ನ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದೇನೆ. ಹೀಗಿರುವಾಗ ನಾನು ಐ.ಟಿ ಅಧಿಕಾರಿಗಳಿಗೆ ಏಕೆ ಭಯ ಪಡಬೇಕು. ನಾನು ಯಾವುದೇ ಆಸೆ , ಆಮಿಷಗಳಿಗೆ ಒಳಗಾಗಿ ರಾಜೀನಾಮೆ ಕೊಟ್ಟವನಲ್ಲ,ಸಮ್ಮಿಶ್ರ ಸರ್ಕಾರದಲ್ಲಿ ಸರಿಯಾಗಿ ಕೆಲಸ ಆಗದೇ ಇದ್ದ ಕಾರಣದಿಂದಾಗಿ ರಾಜೀನಾಮೆ ನೀಡಿದ್ದೇನೆ ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ. ಇದೇ ಕಾರಣಕ್ಕಾಗಿಯೇ ನಾನು ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದೆ. ಆದ್ರೇ ಇಡಿ, ಐಟಿ ದಾಳಿಗೆ ಹೆದರಿ ರಾಜೀನಾಮೆ ನೀಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ಪಡಿಸಿದರು.