ಬೆಂಗಳೂರು: ಜಾತ್ರೆ ಅಂದ್ರೆ ಸಹಜವಾಗಿ ತೇರು, ಜಾನಪದ ಕಲಾಮೇಳಗಳು, ಪಲ್ಲಕ್ಕಿ ಉತ್ಸವ, ಹಾಡು, ನೃತ್ಯ ಇತ್ಯಾದಿಗಳಿಂದ ಕಂಗೊಳಿಸುತ್ತವೆ. ಗ್ರಾಮೀಣ ಭಾಗದಲ್ಲಂತೂ ಕೃಷಿಯ ಫಸಲು ಮನೆಗೆ ಬಂದು ಗ್ರಾಮಕ್ಕೆ ಕೆಡುಕು ಆಗದಂತೆ ಗ್ರಾಮ ದೇವರುಗಳಿಗೆ ತೃಪ್ತಿಪಡಿಸಿ ನೆಂಟರಿಷ್ಟರ ಕರೆಸಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿನ ಮದ್ದೂರಮ್ಮ ಜಾತ್ರೆ ಕೋಮು ಸಾಮರಸ್ಯವನ್ನ ಗಟ್ಟಿಗೊಳಿಸೋ ಐತಿಹಾಸಿಕ ಸತ್ಯವೊಂದನ್ನ ಹೇಳುತ್ತಲೇ ಸಾಂಸ್ಕೃತಿಕ ಆಚರಣೆಗೆ ಸಾಕ್ಷಿಯಾಗುತ್ತಲೇ ಬಂದಿದೆ.
350 ವರ್ಷಗಳ ಇತಿಹಾಸವಿರುವ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ಆನೇಕಲ್ ಸುತ್ತಮುತ್ತಲ ಹಳ್ಳಿಗಳಲ್ಲಿ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾಗಿದೆ. ತೇರುಗಳು ತಾವು ನಡೆದದ್ದೇ ದಾರಿಯೆಂಬತೆ ಸಾಗುತ್ತವೆ. ಇವು ಸಾಗುವ ದಾರಿಯಲ್ಲಿ ಕರೆಂಟ್ ವೈರ್ ಅಡ್ಡ ಬಂದರೆ ಅವನ್ನು ಕ್ಷಣದಲ್ಲೇ ಕಟ್ ಮಾಡಲಾಗುತ್ತದೆ. ಎತ್ತುಗಳ ಜೊತೆ 2 ಟ್ರ್ಯಾಕ್ಟರ್ ಹಾಗೂ 1 ಜೆಸಿಬಿ ತೇರುಗಳು ನಿಗದಿತ ಸ್ಥಳ ಸೇರುವವರೆಗೂ ಶ್ರಮಿಸುತ್ತಿರುತ್ತವೆ. ಇನ್ನು ಇದೇ ರೀತಿಯ 10 ತೇರುಗಳು ಮದ್ದೂರಮ್ಮ ದೇವಾಲಯದ ಬಳಿ ಆಗಮಿಸುತ್ತವೆ.
ಇಡೀ ಕರ್ನಾಟಕದಲ್ಲೇ ಈ ರೀತಿಯ ಆಚರಣೆ ಬೇರೆ ಎಲ್ಲೂ ಕಾಣಲು ಸಿಗುವುದಿಲ್ಲ. ಈ ಜಾತ್ರೆಯ ಮತ್ತೊಂದು ವೈಶಿಷ್ಟವೆಂದರೆ ತೇರುಗಳು. 12 ಹಳ್ಳಿಗಳಿಂದ 150 ರಿಂದ 200 ಅಡಿ ಉದ್ದದ 10ಕ್ಕೂ ಹೆಚ್ಚು ರಂಗು ರಂಗಿನ ತೇರುಗಳನ್ನ 15 ಕೀ.ಮೀ. ದೂರದಿಂದ ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತದೆ. ರಂಗುರಂಗಿನ ಬಟ್ಟೆಗಳಿಂದ ವಿಶಿಷ್ಟ ಶೈಲಿಯ ವಿನ್ಯಾಸದ ಚಿತ್ತಾರಗಳನ್ನ ಹೊದಿಕೆಯಾಗಿಸಿಕೊಂಡು ಮರದ ಅಟ್ಟಣಿಗೆಗಳನ್ನ ನಿರ್ಮಿಸುತ್ತಾರೆ. ಎಷ್ಟು ಎತ್ತರ, ಯಾವ ಗ್ರಾಮದ ತೇರು ಎಂಬುದು ಪ್ರತಿಷ್ಠೆಯಾಗಿಸಿಕೊಳ್ಳುವ ಸ್ಪರ್ಧೆಗೆ ಹುಸ್ಕೂರು ಜಾತ್ರೆ ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತು.