ನೆಲಮಂಗಲ : "ನೀನು ಎರಡನೇ ಮದುವೆಯಾಗಿದ್ದಿ, ನಾನೇಕೆ ಆಗಬಾರದು" ಎಂದು ಕ್ಯಾತೆ ತೆಗೆದ ಗಂಡನೊಬ್ಬ ಹೆಂಡತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆಕೆಯ ಸಾವಿಗೆ ಕಾರಣವಾದ ಘಟನೆ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಗಂಗಮ್ಮ ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಿದ್ದರಾಜು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಏಳು ವರ್ಷದ ಹಿಂದೆ ಗಂಗಮ್ಮ ಹಾಸನ ಮೂಲದ ದೇವರಾಜು ಎಂಬಾತನನ್ನು ವಿವಾಹವಾಗಿದ್ದರು. ಬಳಿಕ, ಕೌಟುಂಬಿಕ ಕಲಹದಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಗಂಗಮ್ಮ ಗಂಡನನ್ನು ತೊರೆದು ತವರು ಮನೆ ಸೇರಿದ್ದರು. ಈ ವೇಳೆ, ಆಕೆಗೆ ಬಾಳು ಕೊಡುವುದಾಗಿ ಬಂದವನೇ ಸೋದರ ಸಂಬಂಧಿ ಸಿದ್ದರಾಜು. ಗಂಗಮ್ಮಳನ್ನು ಮದುವೆಯಾದ ಬಳಿಕ ಸಿದ್ದರಾಜು ಕುಟುಂಬ ಬೆಂಗಳೂರಿನ ಯಲಹಂಕ ಬಳಿಯ ಜಕ್ಕೂರಿನಲ್ಲಿ ನೆಲೆಸಿತ್ತು. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಕಂದಕ ಸೃಷ್ಟಿಯಾಗಿತ್ತು. ನೀನು ನನ್ನನ್ನು ಎರಡನೇ ಮದುವೆಯಾಗಿದ್ದೀಯಾ, ನಾನೇಕೆ ಇನ್ನೊಂದು ಹುಡುಗಿಯನ್ನು ಮದುವೆಯಾಗಬಾರದು ಎಂದು ಗಂಡ ಸಿದ್ದರಾಜು ಹೆಂಡತಿಯೊಂದಿಗೆ ಪದೇ ಪದೆ ಕ್ಯಾತೆ ತೆಗೆಯುತ್ತಿದ್ದನಂತೆ.