ಬೆಂಗಳೂರು: ಎರಡನೇ ಹೆಂಡತಿಯ ಕೊಲೆ ಮಾಡಿ ಪರಾರಿಯಾಗಿದ್ದ ಗಂಡನನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಏ.23ರ ಬೆಳಗ್ಗೆ ಆರೋಪಿ ತನ್ನ ಹೆಂಡತಿ ನಿಶು(19)ಳ ಕತ್ತಿಗೆ ವೈರ್ ನಿಂದ ಬಿಗಿದು ತನ್ನಿಬ್ಬರ ಮಕ್ಕಳ ಮುಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತನ್ನ ಅತ್ತೆಯ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದ. ನೇಪಾಳ ಮೂಲದ ಅಮರ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮರ್ ನಿಶುಳನ್ನ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ.
ನಿಶು ಕೂಡ ನೇಪಾಳ ಮೂಲದವರಾಗಿದ್ದು, ಇಲ್ಲಿಯ ಕೂಡ್ಲು ಬಳಿಯ ನೆಂಟರ ಮನೆಗೆ ಆರು ತಿಂಗಳ ಹಿಂದೆ ಬಂದು ನೆಲೆಸಿದ್ದರು. ನಂತರ ಗುರು ಹಿರಿಯರ ಸಮ್ಮುಖದಲ್ಲಿ ನಿಶುಳಿಗೆ ಅಮರ್ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಇದಕ್ಕೂ ಮುನ್ನ ಆರೋಪಿಗೆ ಪುಷ್ಪ ಎಂಬವವರ ಜೊತೆ ವಿವಾಹವಾಗಿತ್ತು. ಮೊದಲ ಹೆಂಡತಿಗೆ 5 ಮತ್ತು 6ವರ್ಷದ ಹೆಣ್ಣು ಗಂಡು ಮಕ್ಕಳಿದ್ದರು. ಅಮರ್ನ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದ್ದು ಇದೀಗ ಅದೂ ಕೂಡ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಅಂತರಾಜ್ಯ ಕಳ್ಳರ ಬಂಧನ:ವಿಧಾನಸಭೆ ಚುನಾವಣೆಯಂದು ಮತದಾನಕ್ಕೆಂದು ಊರಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಅಂತಾರಾಜ್ಯ ಕಳ್ಳರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿಯ ಹರೀಶ್ ಎಂಬುವವರ ಮನೆಯ ಬೀಗ ಮುರಿದು ಚಿನ್ನ ಒಡವೆ ಕಳ್ಳತನ ಮಾಡಲಾಗಿತ್ತು. ತಮಿಳುನಾಡು ಮೂಲದ ಸರವಣ(39) ಮತ್ತು ದಿನೇಶ್(33) ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 155 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 9,75,000ರೂ ಎಂದು ಇನ್ಸ್ಪೆಕ್ಟರ್ ಬಿ ಐಯ್ಯಣ್ಣ ರೆಡ್ಡಿ ತಿಳಿಸಿದ್ದಾರೆ. ಜೊತೆಗೆ ಆರೋಪಿಗಳು ಬಳಸಿದ್ದ ಸುಝುಕಿ ಆಕ್ಸಿಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.