ದೇವನಹಳ್ಳಿ: ಕೈ ಹಿಡಿದ ಹೆಂಡತಿ ಅದೃಷ್ಟಹೀನಳಾಗಿದ್ದಳು ಎಂದು ಬಲವಾಗಿ ನಂಬಿದ್ದ ಮೂರ್ಖ ಪತಿ ಆಕೆಯನ್ನು ಭೀಕರವಾಗಿ ಕೊಂದಿದ್ದಾನೆ.
ತನ್ನ ಬಾಳಿಗೆ ಹೆಂಡತಿ ಶಾಪವಾಗಿದ್ದಳು ಎಂದು ತಿಳಿದಿದ್ದ ಆತ ಆಕೆಯಿಂದ ದೂರವಾಗಲು ಆಕೆಯ ಮೇಲೆ ಕಾರು ಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದ. ಹೆಂಡತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ, ಪೊಲೀಸರ ಚಾಣಾಕ್ಷ ಬುದ್ದಿಯಿಂದ ಈ ಕಿರಾತಕನ ನಾಟಕ ಬಯಲಾಗಿದೆ.
ರಾಜಸ್ಥಾನ ಮೂಲದ ತೇಜ್ ಸಿಂಗ್ (27) ಎಂಬಾತ ದೀಪಲ್ ಕಂವಾರ್ (27) ರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ನಂತರ ದಂಪತಿ ಯಲಹಂಕ ಸಮೀಪದ ಹುಣಸಮಾರನಹಳ್ಳಿಯ ಜನತಾ ಕಾಲೋನಿಯಲ್ಲಿ ವಾಸವಾಗಿದ್ದರು. ಅಲ್ಲಿಯೇ ಚಿನ್ನಾಭರಣ ಅಂಗಡಿ ಇಟ್ಟು ವ್ಯವಹಾರ ಮಾಡುತ್ತಿದ್ದ. ಆದರೆ, ಅವರಿಬ್ಬರ ಸಂಸಾರದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚಿತ್ತು ಎನ್ನಲಾಗಿದೆ. ನಿತ್ಯ ಜಗಳವಾಡುತ್ತಿದ್ದ ದಂಪತಿಗಳ ಸಂಸಾರಿಕ ಜೀವನ ಹೆಂಡತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ.
ಅದೃಷ್ಟಹೀನಳಾಗಿದ್ದಳಂತೆ:
ತೇಜ್ ಸಿಂಗ್, ಮನೆಯವರ ಒತ್ತಾಯಕ್ಕೆ ಮಣಿದು ಗಟ್ಟು ಕಂವಾರ್ಳನ್ನು ಮದುವೆಯಾಗಿದ್ದ. ಮದುವೆಯಾದ ದಿನವೇ ಆತನ ಚಿಕ್ಕಪ್ಪ ಸಾವನ್ನಪ್ಪಿದ್ದರು. ಇದರಿಂದ ಹೆಂಡತಿಯ ಮೇಲೆ ಮತ್ತಷ್ಟು ವಿರಸ ಮೂಡಿಸಿತ್ತು. ಆಕೆ ತನ್ನ ಬಾಳಿಗೆ ಶಾಪವಾಗಿದ್ದಾಳೆ. ತನ್ನ ಬಾಳಿಗೆ ಅದೃಷ್ಟಹೀನಳು ಎಂದು ತಿಳಿದು ಕೊಲೆ ಮಾಡಲು ಸ್ಕೆಚ್ ರೂಪಿಸಿದ್ದನಂತೆ.
ಸ್ನೇಹಿತನ ಹೆಸರಲ್ಲಿ ಕಾರ್ ಬುಕ್:
ನವೆಂಬರ್ 16 ರಂದು ತನ್ನ ಸ್ನೇಹಿತ ಗುರುಪ್ರೀತ್ ಸಿಂಗ್ಗೆ ಹೇಳಿ ಜೂಮ್ ಕಾರು ಬುಕ್ ಮಾಡಿಸಿದ್ದ. ಗುರು ಕಾರನ್ನ ತೇಜ್ ಸಿಂಗ್ ವಾಸವಿದ್ದ ಹುಣಸಮಾರನಹಳ್ಳಿಯ ನಿವಾಸಕ್ಕೆ ಬಿಟ್ಟು ಅಲ್ಲಿಂದ ತೆರಳಿದ್ದ. ಅನಂತರ ತೇಜ್ ಸಿಂಗ್, ಸ್ನೇಹಿತರಾದ ಶಂಕರ್ ಸಿಂಗ್ ಮತ್ತು ಭರತ್ ಸಿಂಗ್ ಜೊತೆ ರಾತ್ರಿ ವೇಳೆ ಅಮೃತಹಳ್ಳಿಯ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳುತ್ತಾನೆ. ಅಲ್ಲಿಗೆ ತನ್ನ ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದ.
ಸ್ನೇಹಿತರ ಜೊತೆ ಕಂಠಪೂರ್ತಿ ಕುಡಿದಿದ್ದ ತೇಜ್ ಸಿಂಗ್ ಹೆಂಡತಿಗೂ ಕಂಠಪೂರ್ತಿ ಕುಡಿಸಿದ್ದಾನೆ. ರಾತ್ರಿ 10 ಗಂಟೆಯ ವೇಳೆಗೆ ಊಟ ಮುಗಿಸಿದ ಆತ, ಸ್ನೇಹಿತರನ್ನು ಅವರ ಮನೆಗೆ ಬಿಟ್ಟು ಹೆಂಡತಿಯನ್ನ ಕಾರಿನಲ್ಲಿ ಕೂರಿಸಿಕೊಂಡು ದೇವನಹಳ್ಳಿಯತ್ತ ಬಂದಿದ್ದಾನೆ. ಕಂಠಪೂರ್ತಿ ಕುಡಿದಿದ್ದ ಹೆಂಡತಿ ಗಾಢನಿದ್ರೆಯಲ್ಲಿದಳು. ರಾಷ್ಟ್ರೀಯ ಹೆದ್ದಾರಿ 4 ರ ಬಚ್ಚಹಳ್ಳಿಯಲ್ಲಿ ಕಾರಿನ ಬಾಗಿಲು ತೆಗೆದ ಪತಿ, ಹೆಂಡತಿಯನ್ನ ಕಾರಿನಿಂದ ಹೊರಗೆ ತಳ್ಳಿ, ಆಕೆಯ ಮೇಲೆ ಕಾರು ಹರಿಸಿ ಭೀಕರವಾಗಿ ಕೊಂದಿದ್ದಾನೆ. ಇದಾದ ನಂತರ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಗೆ ಬಂದು, ಬಚ್ಚಹಳ್ಳಿ ಬಳಿ ವಾಂತಿ ಮಾಡಲೆಂದು ತನ್ನ ಹೆಂಡತಿ ಕಾರಿನಿಂದ ಕೆಳಗಿಳಿದ್ದಾಗ ಅಪರಿಚಿತ ಕಾರು ಆಕೆಯ ಮೇಲೆ ಹರಿದಿದೆ ಎಂದು ಪ್ರಕರಣ ದಾಖಲಿಸಿದ್ದ.
ಸಾಕ್ಷಿಯಾದ ಜಿಪಿಎಸ್:
ತೇಜ್ ಸಿಂಗ್ ಹೆಂಡತಿಯ ಕೊಲೆಗೆ ಬಳಸಿದ್ದು ಜೂಮ್ ಕಾರು. ಈ ಕಾರಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ಜಿಪಿಎಸ್ ವರದಿ ತರಿಸಿಕೊಂಡ ಪೊಲೀಸರಿಗೆ ಅಪಘಾತ ನಡೆದ ಜಾಗದಲ್ಲಿ ಕಾರು ಹಿಂದಕ್ಕೂ ಮುಂದಕ್ಕೂ ಚಲಿಸಿರೋದು ಗೊತ್ತಾಗಿದೆ. ಜೊತೆಗೆ ಹುಣಸಮಾರನಹಳ್ಳಿ ಮನೆಗೆ ಹೋಗುವ ಬದಲಿಗೆ ದೇವನಹಳ್ಳಿ ಕಡೆಗೆ ಬಂದಿದ್ದು ಯಾಕೆ. ಅಲ್ಲದೆ ಯಾವತ್ತು ಹೆಂಡತಿಯನ್ನ ಹೊರಗೆ ಕರೆದುಕೊಂಡು ಹೋಗದೆ ಇದ್ದವನು ಅಂದು ಕರೆದುಕೊಂಡು ಹೋಗಿದ್ದು ಯಾಕೆ? ಈ ಎಲ್ಲಾ ಪ್ರಶ್ನೆಗಳನ್ನ ಪೊಲೀಸರು ತೇಜ್ ಸಿಂಗ್ ಮುಂದೆ ಇಟ್ಟಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ .