ನೆಲಮಂಗಲ :ಪ್ರೀತಿಸಿದ್ದ ಜೋಡಿ ಕಳೆದೆರಡು ವರ್ಷದ ಹಿಂದೆ ಶಕ್ತಿ ದೇವತೆಯ ದೇವಾಲಯದಲ್ಲಿ ಮದುವೆ ಮಾಡಿಕೊಂಡಿತ್ತು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮುದ್ದಾದ ಗಂಡು ಮಗು ಸಹ ಇತ್ತು. ಆದ್ರೆ, ಇತ್ತೀಚೆಗೆ ವರದಕ್ಷಿಣೆ ಭೂತ ಮೈಗೇರಿಸಿಗೊಂಡಿದ್ದ ಪತಿ, ರಾತ್ರಿ ಕುಡಿದ ಮತ್ತಿನಲ್ಲಿ ಹೆಂಡತಿಯನ್ನ ಮಹಡಿ ಮೇಲಿಂದ ತಳ್ಳಿ ಕೊಂದು ಬಿಟ್ಟಿದ್ದಾನೆ.
ಘಟನೆಯಲ್ಲಿ ಕೊಲೆಯಾಗಿರುವ 20 ವರ್ಷದ ಚೈತ್ರ ಹಾಗೂ 24 ವರ್ಷದ ಕಾಂತರಾಜ್ ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಅಕ್ಕ-ಪಕ್ಕದ ಗ್ರಾಮದವರು. ಇವರು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿಯ ಸಿದ್ದನ ಹೊಸಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಅದೇನಾಯ್ತೋ ಏನೋ ರಾತ್ರಿ ವರದಕ್ಷಿಣೆ ವಿಷಯವಾಗಿ ಗಲಾಟೆ ಆರಂಭಗೊಂಡು ಪತಿ ಕಾಂತರಾಜ್ ತನ್ನ ಪತ್ನಿ ಚೈತ್ರಾಳನ್ನ 3ನೇ ಮಹಡಿಯಿಂದ ತಳ್ಳಿಬಿಟ್ಟಿದ್ದಾನೆ. ಮೇಲಿಂದ ಬಿದ್ದ ತಕ್ಷಣ ಆಕೆಯ ಪೋಷಕರು ಆಸ್ಪತ್ರೆಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಾಕಳಿ ಬಳಿಯ ಬ್ರಿಟಾನಿಯಾ ಬಿಸ್ಕೇಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪೋಷಕರಿಗೆ ಪ್ರೀತಿಯ ವಿಷಯ ತಿಳಿಸದೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಳನೂರಿನಲ್ಲಿರುವ ಶಕ್ತಿ ದೇವತೆ ಗಾಳಿ ಮಾರಮ್ಮ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದರು. ಅಲ್ಲದೆ ಅದೇ ಹೊಳಲ್ಕೆರೆಯ ಉಗಣಕಟ್ಟೆಯಲ್ಲಿ ವಾಸಿಸುತ್ತಿದ್ದರು.
ಓದಿ: ಅತ್ಯಾಚಾರ, ಕೊಲೆ ಪ್ರಕರಣದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಂಧನ
ಮದುವೆಯಾದ ಐದಾರು ತಿಂಗಳ ನಂತರ ಚೈತ್ರ ಗರ್ಭಿಣಿಯಾಗುತ್ತಾಳೆ. ಅಂದಿನಿಂದ ಇವರಿಬ್ಬರ ಬಾಳಲ್ಲಿ ಬಿರುಗಾಳಿ ಬೀಸಿದೆ. ಚೈತ್ರ ಗರ್ಭಿಣಿಯಾದ ನಂತರ ಕಾಂತರಾಜ್ ಈಕೆಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ನಿನ್ನ ಒಡವೆಗಳನ್ನೆಲ್ಲ ತಂದು ಕೊಡು ಎಂದು ಹಿಂಸಿಸುತ್ತಿದ್ದಾನಂತೆ.
ಪಾಪಿ ಪತಿ ಯಾವಾಗ ಚಿತ್ರಹಿಂಸೆ ನೀಡಲು ಶುರು ಮಾಡಿದನೋ ಅಂದಿನಿಂದ ಚೈತ್ರಳಿಗೆ ತಾಯಿ ಮನೆ ನೆನಪಾಗಿ ತನಗಾದ ನೋವನ್ನ ತಾಯಿ ಬಳಿ ಹೇಳಿಕೊಳ್ಳಲು ಶುರು ಮಾಡಿದ್ದಾಳೆ. ಕೆಲ ದಿನಗಳ ನಂತರ ಚೈತ್ರ ಪೋಷಕರು ಇಬ್ಬರನ್ನು ಕರೆದುಕೊಂಡು ಬಂದು ತಮ್ಮ ಜೊತೆಯಲ್ಲೇ ಇರಿಸಿಕೊಂಡು ಮಗುವಾದ ನಂತರ ಅವರೇ ನೋಡಿ ಕೊಂಡು ಪಾಲನೆ ಮಾಡಿದ್ದಾರೆ.
ಆದ್ರೂ ಚೈತ್ರಾಳಿಗೆ ಮಾನಸಿಕ ಕಿರುಕುಳ ತಪ್ಪಿರಲಿಲ್ಲವಂತೆ. ಪ್ರತಿದಿನ ಮಗುವನ್ನ ತನ್ನ ತಾಯಿ ಬಳಿ ಬಿಟ್ಟು ಪೆಟ್ರೋಲ್ ಬಂಕ್‌ನಲ್ಲಿ ಚೈತ್ರ ಕೆಲಸ ಮಾಡುತ್ತಿದ್ರೆ, ಗೋದಾಮು ಒಂದರಲ್ಲಿ ಕಾಂತರಾಜ್ ಕೆಲಸ ಮಾಡುತ್ತಿದ್ದ. ದೈನಂದಿನ ಜಗಳ ಇದ್ದರೂ ಸಹ ಇತ್ತೀಚೆಗೆ ಇಬ್ಬರು ಸೇರಿ ಮಗುವಿನ ಹುಟ್ಟಹಬ್ಬವನ್ನು ಖುಷಿಯಾಗಿ ಮಾಡಿದ್ರು.
ಆದ್ರೆ, ನಿನ್ನೆ ರಾತ್ರಿ ಅದೇನಾಯ್ತೋ ಏನೋ ಪತ್ನಿ ಚೈತ್ರಾಳಿಗೆ ಮನಸೋ ಇಚ್ಛೆ ರಾಡ್ನಿಂದ ಹಲ್ಲೆ ಮಾಡಿರುವ ಪಾತಿ ಪತಿ ಕಾಂತರಾಜ್, ತಾವು ವಾಸವಿದ್ದ ಮನೆಯ 3ನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದು, ಡಿವೈಎಸ್ಪಿ ಜಗದೀಶ್ ಅವರು ಸ್ಥಳ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಗಂಡ-ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಂತೆ ಇಲ್ಲಿ ಇಬ್ಬರ ಜಗಳದಲ್ಲಿ ಹೆಂಡತಿ ಮಸಣ ಸೇರಿದ್ರೆ, ಗಂಡ ಜೈಲು ಪಾಲಾಗಿದ್ದಾನೆ. ಆದ್ರೆ, ಜಗತ್ತಿನ ಆಗುಹೋಗುಗಳನ್ನ ಅರಿಯದ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಮಾತ್ರ ಅನಾಥವಾಗಿದೆ.