ನೆಲಮಂಗಲ (ಬೆಂ.ಗ್ರಾ) :ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿ, ಗಂಡನನ್ನ ಹೆದರಿಸಲೆಂದು ನೇಣು ಹಾಕಿಕೊಳ್ಳುವುದಾಗಿ ಹೆಂಡತಿ ಹಗ್ಗಕ್ಕೆ ಕೊರಳಿಟ್ಟಿದ್ದಳು. ನೀನು ಬದುಕುವುದೇ ಬೇಡವೆಂದ ಗಂಡ ಆಕೆಯ ಕಾಲೆಳೆದು ಮಕ್ಕಳ ಎದುರೇ ಕೊಂದೇಬಿಟ್ಟಿದ್ದ.
2013ರಲ್ಲಿ ನಡೆದ ಕೊಲೆ ಆರೋಪಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ 2ನೇ ಅಪರ ಸತ್ರ ನ್ಯಾಯಾಲಯ 55 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ಕೊಟ್ಟಿದೆ. ಕಾಂತರಾಜು (31) ಶಿಕ್ಷೆಗೆ ಒಳಪಟ್ಟ ಅಪರಾಧಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಹಸುಗಳನ್ನು ಸಾಕುವ ಕೆಲಸವನ್ನು ಅಪರಾಧಿ ಕಾಂತರಾಜು ಹಾಗೂ ಆತನ ಹೆಂಡತಿ ಮೃತೆ ಲಲಿತಾಬಾಯಿ ಮಾಡುತ್ತಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆ ಕಾಟನಾಯಕನಹಳ್ಳಿಯವರಾದ ಇಬ್ಬರು ಜೀವನಾಧಾರಕ್ಕಾಗಿ ನೆಲಮಂಗಲದ ಗೊಲ್ಲಹಳ್ಳಿಗೆ ಬಂದಿದ್ದು, ಅಪರಾಧಿ ಕಾಂತರಾಜ್ ತನಗಿಂತ 11 ವರ್ಷ ಹಿರಿಯವಳಾದ ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಂದಿಗೆ ಅಕ್ರಮವಾಗಿ ಮದುವೆಯಾಗಿದ್ದ.
ದಿನ ಕಳೆದಂತೆ ಕೌಟುಂಬಿಕ ಕಲಹ ಉಂಟಾದ ಕಾರಣ ಮೃತೆ ಲಲಿತಾಬಾಯಿ ತನ್ನ ಪತಿ ಕಾಂತರಾಜುಗೆ ಬೆದರಿಸಲು ಕೋಪದಿಂದ ನೇಣು ಹಾಕಿಕೊಳ್ಳುವುದಾಗಿ ಕೊರಳಿಗೆ ಹಗ್ಗ ಕಟ್ಟಿಕೊಂಡಿರುತ್ತಾಳೆ. ಈ ವೇಳೆ ಅಪರಾಧಿ ಕಾಂತರಾಜು ಆಕೆಯ ಕಾಲು ಹಿಡಿದು, ಎಳೆದು ಕುತ್ತಿಗೆಗೆ ಹಗ್ಗ ಬಿಗಿದುಕೊಳ್ಳುವಂತೆ ಮಾಡಿ ಕೊಲೆ ಮಾಡಿದ್ದಾನೆ.
ಘಟನೆ ವೇಳೆ ಪ್ರತ್ಯಕ್ಷವಾಗಿ ನೋಡಿದ ಮಕ್ಕಳನ್ನು ಬೆದರಿಸಿ ಈ ವಿಚಾರ ಯಾರಿಗಾದರು ಹೇಳಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ನಂತರ ಮೃತ ದೇಹವನ್ನ ಚಿತ್ರದುರ್ಗ ಜಿಲ್ಲೆಯ ಕಾಟನಾಯಕನಹಳ್ಳಿಗೆ ತೆಗೆದುಕೊಂಡು ಹೋಗಿ ಎಸೆದಿದ್ದ.
ಶವವನ್ನ ಕಂಡು ಘಟನೆಗೆ ಸಂಬಂಧಿಸಿದಂತೆ ಮೃತಳ ಮಾವ ಲಚ್ಚನಾಯಕ್ ಹಿರಿಯೂರು ಪೊಲೀಸ್ ಠಾಣೆಗೆ ಬಂದು, ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಹಿರಿಯೂರು ಪೊಲೀಸರಿಗೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲೇ ಕೊಲೆ ನಡೆದಿರುವುದಾಗಿ ತಿಳಿದುಬರುತ್ತದೆ.
ಅದರಂತೆ ನೆಲಮಂಗಲ ಗ್ರಾಮಾಂತರ ಠಾಣೆಗೆ ಪ್ರಕರಣವನ್ನ ವರ್ಗಾಯಿಸಿದ್ದಾರೆ. ಅಂದಿನ ಡಿವೈಎಸ್ಪಿ ಮಲ್ಲೇಶ್ ಪ್ರಕರಣದ ತನಿಖೆ ನಡೆಸಿದ್ದು, ನೆಲಮಂಗಲ ಗ್ರಾಮಾಂತರ ಠಾಣೆ ಮೊಕದ್ದಮೆ ಸಂಖ್ಯೆ 363/2013ರಂತೆ ಐಪಿಸಿ 302, 201, 497, 506 ಹಾಗೂ ಎಸ್‌ಸಿಎಸ್‌ಟಿ ದೌರ್ಜನ್ಯ ಖಾಯ್ದೆ ಅಡಿ ದೋಷಾರೋಪ ಪಟ್ಟಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಅಪರ ಸತ್ರ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡನೆಯನ್ನ ಸರ್ಕಾರಿ ಅಭಿಯೋಜಕರು ಸಂಗಮೇಶ ಹಾವೇರಿ ಅವರು ನಡೆಸಿದ್ದು, ಪ್ರಕರಣ 7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದೆ. ಇದೀಗ ನ್ಯಾಯಾಧೀಶೆ ಪ್ರಶೀಲಾ ಕುಮಾರಿ ವಾದ-ಪ್ರತಿವಾದಗಳು, ದೋಷಾರೋಪ ಪಟ್ಟಿಯನ್ನ ಪರಿಶೀಲನೆ ನಡೆಸಿದ್ದು, ಅಪರಾಧ ಸಾಬೀತಾದ ಹಿನ್ನೆಲೆ ಅಪರಾಧಿ ಕಾಂತರಾಜುಗೆ 55,000 ರೂ ದಂಡ ವಿಧಿಸಿದ್ದು, ಮೃತಳ ಮಕ್ಕಳಿಗೆ 50,000 ರುಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.