ನೆಲಮಂಗಲ(ಬೆಂ.ಗ್ರಾಮಾಂತರ):ಕೊರೊನಾ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಎಲ್ಲರಿಗೂ ಚಿಕಿತ್ಸೆ ಸಾಧ್ಯವಾಗದಿರುವುದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗಿನ ಸಂಘರ್ಷದ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಈ ಸಮಸ್ಯೆಯಿಂದ ಪಾರಾಗುವುದಕ್ಕೆ ಆಸ್ಪತ್ರೆಗಳು ಬೌನ್ಸರ್ಗಳ ಮೊರೆ ಹೋಗಿದ್ದಾರೆ.
ತುಮಕೂರು ರಸ್ತೆಯ ನಾಗಸಂದ್ರದ 8ನೇ ಮೈಲಿ ಬಳಿಯಿರುವ ಪ್ರಕ್ರಿಯಾ ಆಸ್ಪತ್ರೆಯು ತನ್ನ ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿಗೆ ದಾಳಿಯ ವೇಳೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣದಿಂದ ರಕ್ಷಣೆಗಾಗಿ ಬೌನ್ಸರ್ಗಳನ್ನ ನೇಮಿಸಿಕೊಂಡಿದೆ. ಇದೊಂದು ವಿಚಿತ್ರ ಎನಿಸಿದರು, ಪ್ರಸ್ತುತ ಸನ್ನಿವೇಶದಲ್ಲಿ ಅದರ ಅವಶ್ಯಕತೆ ತುಂಬಾ ಇದೆ ಎನ್ನುತ್ತಾರೆ ಆಸ್ಪತ್ರೆಯವರು.
ಆಸ್ಪತ್ರೆಯಲ್ಲಿ ನೇಮಕವಾದ ಬೌನ್ಸರ್ಗಳು ಈ ವ್ಯವಸ್ಥೆಯನ್ನ ಕೆಲ ದಿನಗಳ ಮಟ್ಟಿಗೆ ಮಾಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ರೋಗಿಗಳಿಗೆ ಬೆಡ್ ಸಿಗದಿದ್ದಾಗ, ಅವರ ಕಡೆಯವರು ಅನಗತ್ಯವಾಗಿ ದಾಳಿ ಮಾಡುವ ಸಂದರ್ಭಗಳು ಎದುರಾಗುತ್ತಿವೆ. ಕೊನೆಯ ಕ್ಷಣದಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿ ರೋಗಿಗಳನ್ನ ಕರೆದುಕೊಂಡು ಬಂದರೆ ನಮಗೂ ಕೂಡ ಜೀವ ರಕ್ಷಿಸುವುದು ತುಂಬಾ ಕಷ್ಟವಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ರೋಗಿಗಳ ಕಡೆಯವರು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ, ಆಸ್ಪತ್ರೆಯವರನ್ನ ಹೊಣೆಗಾರರನ್ನಾಗಿ ಮಾಡುವ ಸಂದರ್ಭಗಳು ಘಟಿಸುತ್ತಿವೆ. ಆ ಕಾರಣಕ್ಕಾಗಿ ಮುಂಜಾಗ್ರತಾ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಅಂತಾರೆ ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ ಶ್ರೀನಿವಾಸ ಚಿರುಕುರಿ.
ಬೌನ್ಸರ್ಗಳನ್ನ ನಾವು ಹೆಚ್ಚು ದಿನ ನೇಮಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಕಾರಣ ಇಬ್ಬರು ಬೌನ್ಸರ್ಗಳಿಗೆ ತಿಂಗಳಿಗೆ 3 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಸಂಘವು ಪ್ರತಿ ಆಸ್ಪತ್ರೆಗೂ ಒಬ್ಬ ಪೊಲೀಸ್ ಸಿಬ್ಬಂದಿಯನ್ನ ನೇಮಿಸುವಂತೆ ಸರ್ಕಾರವನ್ನ ಕೇಳಿಕೊಂಡಿದೆ ಎಂದು ತಿಳಿಸಿದರು.
ಇತ್ತೀಚಿಗೆ ಆಸ್ಪತ್ರೆಯಲ್ಲಿ ನಡೆದ ಘರ್ಷಣೆಯ ಸಂದರ್ಭವೊಂದನ್ನ ಡಾ ಶ್ರೀನಿವಾಸ್ ಈ ಸಂದರ್ಭದಲ್ಲಿ ಹಂಚಿಕೊಂಡರು. ರೋಗಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ, ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದು ಸತ್ಯವಾದರೂ ನಾವು ಅವರ ಪ್ರಾಣ ರಕ್ಷಣೆಗಾಗಿ ಮಾಡಿದ ಪ್ರಯತ್ನ, ಚಿಕಿತ್ಸಾ ವೆಚ್ಚ ಎಲ್ಲವೂ ಪರಿಗಣಿಸಲೇಬೇಕಾಗುತ್ತದೆ. ಇದನ್ನ ರೋಗಿಗಳ ಸಂಬಂಧಿಗಳು ಅರ್ಥಮಾಡಿಕೊಂಡರೆ ನಾವು ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಎಂದರು.