ಹೊಸಕೋಟೆ: ತಾಲೂಕು ಸೂಲಿಬೆಲೆ ಹೋಬಳಿ ಹಸಿಗಾಳ ಗ್ರಾಮದ ಸಮೀಪವಿರುವ ಪೆಟ್ರೋಲ್ ಬಂಕ್ವೊಂದರಲ್ಲಿ ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್, ಡಿಸೇಲ್ ಹಾಕದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ದೂರಿ ಪ್ರತಿಭಟನೆ ನಡೆಸಲಾಗಿದೆ.
ಹೊಸಕೋಟೆ ಪೆಟ್ರೋಲ್ ಬಂಕ್ ನಲ್ಲಿ ವಂಚನೆ ಆರೋಪ: ಗ್ರಾಹಕರಿಂದ ಮುತ್ತಿಗೆ - ಹೊಸಕೋಟೆ ತಾಲೂಕು ಸೂಲಿಬೆಲೆ
ಹೊಸಕೋಟೆ ತಾಲೂಕಿನ ಪೆಟ್ರೋಲ್ ಬಂಕ್ ವೊಂದರಲ್ಲಿ ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್, ಡಿಸೇಲ್ ಹಾಕದೆ ಗ್ರಾಹಕರನ್ನು ವಂಚಿಸುತ್ತಿರುವ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ ಮಾಜಿ ತಾ. ಪಂ. ಸದಸ್ಯ ಮಂಜುನಾಥ್ ಪ್ರತಿಭಟನೆ ನಡೆಸಿದರು.

ಗ್ರಾಹಕರ ವಾಹನಗಳಿಗೆ ಹಾಕುವ ಪೆಟ್ರೋಲ್, ಡಿಸೇಲ್ ಅಳತೆಯಲ್ಲಿ ಮೋಸ ನಡೆಯುತ್ತಿದೆ ಎಂದು ತಾ. ಪಂ. ಮಾಜಿ ಸದಸ್ಯ ಮಂಜುನಾಥ್ ಆರೋಪಿಸಿ ಬಂಕ್ ಎದುರು ಪ್ರತಿಭಟನೆ ನಡೆಸಿದರು. ಸಾರ್ವಜನಿಕರಿಂದ ಈ ಸಂಬಂಧ ದೂರುಗಳು ಬರುತ್ತಲೇ ಇದ್ದ ಹಿನ್ನೆಲೆ ಅದರ ಪರಿಶೀಲನೆಗೆಂದು ನನ್ನ ವಾಹನಕ್ಕೆ ಡಿಸೇಲ್ ಹಾಕಿಸಿ ಚೆಕ್ ಮಾಡಿದ್ರೆ ಮೋಸವಾಗಿರುವುದು ಕಂಡು ಬಂದಿದೆ ಎಂದು ಮಂಜುನಾಥ್ ಆರೋಪಿಸಿದರು. ಜೊತೆಗೆ ಪೆಟ್ರೋಲ್ ಬಂಕ್ ಅನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದರು.
ಸ್ಥಳದಲ್ಲಿ ಜಮಾವಣೆಗೊಂಡಿದ್ದ ನೂರಾರು ಗ್ರಾಮಸ್ಥರು, ಬಂಕ್ ಸಿಬ್ಬಂದಿ ಹಲವರಿಗೆ ಇದೇ ರೀತಿ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಸೂಲಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.