ಬೆಂಗಳೂರು:ಹೊಸಕೋಟೆ ವಿಧಾನಸಭಾ ಕ್ಷೇತ್ರ ಇದೀಗ ರೋಚಕ ಕದನವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕಾರಣದ ಜಿದ್ದಾಜಿದ್ದಿ ಕಣಗಳಲ್ಲಿ ಹೊಸಕೋಟೆ ಕೂಡ ಒಂದಾಗಿದೆ. ಇಲ್ಲಿ ರಾಜಕೀಯ ಪಕ್ಷಗಳ ಆಟ ಯಾವುದೇ ಕಾರಣಕ್ಕೂ ಈವರೆಗೆ ನಡೆಯದಿರುವುದು ಕ್ಷೇತ್ರದ ಮತ್ತೊಂದು ಮುಖ್ಯವಾದ ವಿಷಯ. ಇಲ್ಲಿ ಏನಿದ್ದರೂ ನೇರವಾಗಿ ಎರಡು ಕುಟುಂಬಗಳ ನಡುವಿನ ರಾಜಕೀಯವೇ ಅಧಿಕ. 1962ರಿಂದ 1999ರ ವರೆಗೆ ಈ ಕ್ಷೇತ್ರದಲ್ಲಿ ಬಚ್ಚೇಗೌಡ ಮತ್ತು ಚಿಕ್ಕೇಗೌಡ ಕುಟುಂಬಗಳು ಬಹುತೇಕ ಅಧಿಕಾರ ಚಲಾಯಿಸಿಕೊಂಡು ಬಂದಿವೆ. 2004ರಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಂಟಿಬಿ ನಾಗರಾಜ್ ಆಗಮನದಿಂದ ಇಲ್ಲಿನ ರಾಜಕೀಯದ ಚಿತ್ರಣವೇ ಬದಲಾಗಿ ಹೋಗುತ್ತದೆ.
ಇದನ್ನೂ ಓದಿ:1,510 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂ.ಟಿ.ಬಿ.ನಾಗರಾಜ್; 3 ವರ್ಷದಲ್ಲಿ ₹286 ಕೋಟಿ ಹೆಚ್ಚಳ
ಈವರೆಗೆ ಬಹುತೇಕ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಇನ್ನೊಂದು ವಿಶೇಷ. 2004ರ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿ ವಿಧಾನಸಭೆ ಪ್ರವೇಶ ಮಾಡಿದರು. ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಬಿ.ಎನ್. ಬಚ್ಚೇಗೌಡ ಎರಡನೇ ಸ್ಥಾನಕ್ಕೆ ಕುಸಿದಿದ್ದರು. 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬಿ.ಎನ್. ಬಚ್ಚೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ಅವರು ಬಿಜೆಪಿಯ ಬಿ.ಎನ್. ಬಚ್ಚೇಗೌಡ ವಿರುದ್ಧ 7 ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೆ ವಿಧಾನಸಭೆ ಪ್ರವೇಶ ಮಾಡಿದರು. 2018ರ ವೇಳೆಗೆ ಬಿ.ಎನ್. ಬಚ್ಚೇಗೌಡ ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದರಿಂದ ತಂದೆಯ ಬದಲಾಗಿ ಪುತ್ರ ಶರತ್ ಬಚ್ಚೇಗೌಡ 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗಿಳಿದರು. ಬಿಜೆಪಿಯಿಂದ ಮೊದಲ ಭಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಶರತ್ ಬಚ್ಚೇಗೌಡ, ಕಾಂಗ್ರೆಸ್ನ ಎಂಟಿಬಿ ನಾಗರಾಜ್ ವಿರುದ್ಧ 7,597 ಮತಗಳ ಅಂತರದಿಂದ ಎರಡನೇ ಸ್ಥಾನಕ್ಕೆ ಕುಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಎಂಟಿಬಿ ನಾಗರಾಜ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಪರೇಷನ್ ಕಮಲಕ್ಕೆ ಒಳಗಾದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ನಡೆಸಿದ ಎಂಟಿಬಿ 70,185 ಮತಗಳನ್ನು ಪಡೆದು ಪರಾಭವಗೊಂಡರು. ಎಂಟಿಬಿ ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡಗೊಂಡ ಕಾರಣ ಶರತ್ ಬಚ್ಚೇಗೌಡ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು. ಒಟ್ಟು 81,671 ಮತಗಳನ್ನು ಪಡೆದ ಶರತ್ ಬಚ್ಚೇಗೌಡ, 11,486 ಮತಗಳ ಅಂತರದಿಂದ ಜಯ ಗಳಿಸಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧಕ್ಕೂ ಪ್ರವೇಶ ಮಾಡಿದರು. ಬಳಿಕ ಎಂಟಿಬಿ ಪರಿಷತ್ ಸದಸ್ಯರಾಗಿ ಸಚಿವರಾದರು.