ಹೊಸಕೋಟೆ:ನೀರು ಬರಬೇಕಿದ್ದ ಕೊಳವೆ ಬಾವಿಯಲ್ಲಿ ಪೆಟ್ರೋಲಿಯಂ ಮಿಶ್ರಿತ ನೀರಿನ ಜೊತೆಗೆ ಬೆಂಕಿ ಬರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ದೇವನಗುಂದಿ ಗ್ರಾಮದ ಬಳಿ ಆಯಿಲ್ ಕಂಪನಿಗಳಿದ್ದು, ಅಲ್ಲಿನ ತ್ಯಾಜ್ಯ ಮಿಶ್ರಿತ ನೀರನ್ನು ಮಳೆಗಾಲದಲ್ಲಿ ಸಮೀಪದ ಕೆರೆ, ಬಾವಿಗಳಿಗೆ ಹರಿಸುತ್ತಿದ್ದರಂತೆ. ಕೆಲವು ವರ್ಷಗಳಿಂದ ನಿರುಪಯುಕ್ತ ಕೊಳವೆ ಬಾವಿಗಳಿಗೆ ಈ ತ್ಯಾಜ್ಯವನ್ನು ಬಿಡುತ್ತಿದ್ದಾರಂತೆ. ಪರಿಣಾಮ ಪಕ್ಕದಲ್ಲಿರುವ ರೈತರ ಜಮೀನುಗಳ ಕೊಳವೆ ಬಾವಿಯಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುವುದರ ಜೊತೆಗೆ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಕೊಳವೆ ಬಾವಿಯಲ್ಲಿ ರಾಸಾಯನಿಕ ಮಿಶ್ರಿತ ನೀರಿನ ಜೊತೆಗೆ ಬೆಂಕಿ ಆಯಿಲ್ ಕಂಪನಿಗಳು ನಿರುಪಯುಕ್ತ ಕೊಳವೆ ಬಾವಿಗಳಿಗೆ ಹರಿಸುತ್ತಿರುವ ವೇಸ್ಟೇಜ್ ಇದೀಗ ಅಂತರ್ಜಲ ಸೇರುತ್ತಿದ್ದು, ನೀರು ವಿಷಕಾರಿಯಾಗುತ್ತಿದೆ. ಅಕ್ಕಪಕ್ಕದ ಕೊಳವೆ ಬಾವಿಗಳಲ್ಲೂ ರಾಸಾಯನಿಕ ಮಿಶ್ರಿತ ನೀರು ಬರುತ್ತಿದ್ದು, ಕೃಷಿ ಮಾಡಲು ಆಗದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಬೆಳೆ ಬೆಳೆದರೂ ರೋಗದ ಭೀತಿ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ರೈತರು ಮನವಿ ಮಾಡಿಕೊಂಡರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಚಪ್ಪ ಮಾತನಾಡಿ, ಕಳೆದ 35 ವರ್ಷಗಳಿಂದ ಪೆಟ್ರೋಲಿಯಂ ಕಂಪನಿಯವರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಬೆಳೆ ಬೆಳೆಯಲು ಆಗದೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳಿಂದ ಪೆಟ್ರೋಲಿಯಂ ಉತ್ಪನ್ನ ಕಂಪನಿಯವರು ಕಾರ್ಖಾನೆಯ ತ್ಯಾಜ್ಯ ನೀರನ್ನು ಉಪಯೋಗಕ್ಕೆ ಬಾರದ ಕೊಳವೆ ಬಾವಿಗಳಿಗೆ ಬಿಡುವುದರಿಂದ ಸಮೀಪದಲ್ಲಿರುವ ರೈತರ ಕೊಳವೆ ಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದ್ದು, ಆ ನೀರಿನಿಂದ ಬೆಳೆಯುವ ಬೆಳೆಗಳಿಗೆ ರೋಗಗಳು ಬರುತ್ತಿವೆ. ಪರಿಣಾಮ ದೇವನಗುಂದಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.