ಹೊಸಕೋಟೆ:20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಹೊಸಕೋಟೆ ನಗರ ಸಾರಿಗೆ ಬಸ್ ಟರ್ಮಿನಲ್ನಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದ್ದು, ಶೌಚಾಲಯಗಳು ಗಬ್ಬು ನಾರುತ್ತಿವೆ.
ಹೌದು.. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 2017-18ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ 1.3 ಎಕರೆ ಪ್ರದೇಶದಲ್ಲಿ 20 ಕೋಟಿ ವೆಚ್ಚದಲ್ಲಿ ಹೊಸಕೋಟೆ ಬಸ್ ಟರ್ಮಿನಲ್ ನಿರ್ಮಿಸಿದೆ. ಆದರೆ, ಇಲ್ಲಿ ಮೂಲಸೌಲಭ್ಯಗಳೇ ಮರೀಚಿಕೆಯಾಗಿದ್ದು, ಬಸ್ ನಿಲ್ದಾಣದ ಒಳಗೆ ಯಾವೊಬ್ಬ ಪ್ರಯಾಣಿಕರು ಬರುತ್ತಿಲ್ಲ. ಕಟ್ಟಡ ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಒಳಭಾಗದಲ್ಲಿ ಸ್ವಚ್ಛತೆಯಿಲ್ಲ. ನಿಲ್ದಾಣದಲ್ಲಿ ಕಸ ಗುಡಿಸಿ ಅದೆಷ್ಟೋ ದಿನಗಳೇ ಕಳೆದಿವೆ. ಎಲ್ಲಿ ನೋಡಿದರಲ್ಲಿ ಬೀಡಿ, ಸಿಗರೇಟ್, ಪಾನ್ ಮಸಾಲ ಪ್ಯಾಕೆಟ್, ಮದ್ಯದ ಬಾಟಲ್‌ಗಳೇ ಕಾಣ ಸಿಗುತ್ತವೆ.