ಬೆಂಗಳೂರು: ಅನುದಾನ ರಹಿತ ಶಾಲೆಗಳಿಗೆ ರಾಜ್ಯ ಸರ್ಕಾರ ಯಾವುದೇ ನಿರ್ದಿಷ್ಟ ಪಠ್ಯಪುಸ್ತಕಗಳನ್ನು ಸೂಚಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ(ಕುಸ್ಮ) 1995 ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ರದ್ದು ಮಾಡುವುದು ಸೇರಿದಂತೆ ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ವಿವಿಧ ಸೆಕ್ಷನ್ಗಳನ್ನು ಪ್ರಶ್ನಿಸಿ ಕುಸ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಗುರುವಾರ ವಿಚಾರಣೆ ಪೂರ್ಣಗೊಳಿಸಿದೆ.
ಸರ್ಕಾರ ನಿರ್ಧಿಷ್ಟ ಪಠ್ಯಪುಸ್ತಕಗಳನ್ನು ಬೋಧನೆ ಮಾಡಬೇಕು ಎಂಬುದಾಗಿ ಷರತ್ತು ವಿಧಿಸಬಾರದು. ಖಾಸಗಿ ಶಾಲೆಗಳೇ ಪಠ್ಯ ಕ್ರಮ ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಕ್ತ ಅವಕಾಶ ನೀಡಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೀಸಲಾತಿ ನೀಡುವಂತೆ ಸೂಚಿಸುವ ಕಾಯಿದೆಯ ಸೆಕ್ಷನ್ 41(3)ನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು.