ಕರ್ನಾಟಕ

karnataka

ETV Bharat / state

PSI Scam: ಆರೋಪಿ ಅಮೃತ್ ಪೌಲ್ ಜಾಮೀನು ಅರ್ಜಿ.. ಆದೇಶ ಕಾಯ್ದಿರಿಸಿದ ಹೈಕೋರ್ಟ್ - ETV Bharath Kannada news

ಅಮೃತ್ ಪೌಲ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

PSI Scam
PSI Scam

By

Published : Jul 28, 2023, 11:01 PM IST

ಬೆಂಗಳೂರು : ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ 35ನೇ ಆರೋಪಿಯಾದ ಐಪಿಎಸ್ ಅಧಿಕಾರಿ ಅಮೃತ್​ ಪೌಲ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅಮೃತ್​ ಪೌಲ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮುಕ್ತಾಯಗೊಳಿಸಿತು. ಅಮೃತ್​ ಪೌಲ್ ಪರ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್ ಹಾಗೂ ಪ್ರಾಸಿಕ್ಯೂಷನ್ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದಾರೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಾಗಿದ್ದ ಪ್ರಸನ್ನ ಕುಮಾರ್, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್​ ಪೌಲ್ ಉತ್ತರ ಪತ್ರಿಕೆಗಳನ್ನು ತಿದ್ದಲು ಕಾರಣರಾಗಿದ್ದರು. ಅಲ್ಲದೇ, ಹಗರಣದ ನಡೆದ ವೇಳೆ ಅಮೃತ್​ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು ಮತ್ತು ಆ ಸಮಯದಲ್ಲಿ ಅವರು ಸುಳ್ಳು ದಾಖಲೆಗಳ ಮೂಲಕ ಕಚೇರಿಗೆ ವೈದ್ಯಕೀಯ ರಜೆ ಹಾಕುವ ಮೂಲಕ ಹಗರಣ ನಡೆಯಲು ಕಾರಣವಾಗಿದ್ದರು.

ಉತ್ತರ ಪತ್ರಿಕೆಗಳನ್ನು ತಿದ್ದಿದ 2021ರ ಅಕ್ಟೋಬರ್ 7, 8 ಮತ್ತು 16ರಂದು ಆರೋಪಿಯು ವೈದ್ಯಕೀಯ ರಜೆಯಲ್ಲಿ ಇದ್ದುದಾಗಿ ಹೇಳಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ಅವರು ಆ ದಿನಗಳಂದು ತಮ್ಮ ಪ್ರಮಾಣ ಪತ್ರದಲ್ಲಿ ಹೇಳಿರುವ ಯಲಹಂಕ ನ್ಯೂ ಟೌನ್‌ನಲ್ಲಿರುವ ನವಚೇತನ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಪಡೆದೇ ಇಲ್ಲ. ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಅಂತೆಯೇ, ಆ ದಿನಗಳಲ್ಲಿ ಸ್ಟ್ರಾಂಗ್ ರೂಮ್ ಬೀಗಗಳನ್ನು ತಮ್ಮ ವೈಯಕ್ತಿಕ ಕೊಠಡಿಯಲ್ಲಿರಿಸಿದ್ದರು. ಅಲ್ಲಿಂದ ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ವಾದ ಮಂಡಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್, ಪ್ರಕರಣ ಕುರಿತಂತೆ ವಿಚಾರಣಾ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಹಂತ ಹಂತವಾಗಿ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದು ಇದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ1973ರ (ಸಿಆರ್ಪಿಸಿ) ಕಲಂ 173ಕ್ಕೆ ತದ್ವಿರುದ್ಧವಾಗಿದೆ. ಅರ್ಜಿದಾರರು ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಚಾರಣಾ ನ್ಯಾಯಾಲಯವು ಅವರ ವಿರುದ್ಧದ ಯಾವುದೇ ಅಪರಾಧಗಳನ್ನು ಸಂಜ್ಞೇಯ ಎಂದು ಪರಿಗಣಿಸದೇ ಇರುವ ಕಾರಣ ಅವರ ಬಂಧನ ಕಾನೂನು ಬಾಹಿರವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ, ಹಂತ ಹಂತವಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಸಿಆರ್‌ಪಿಸಿ ಕಲಂ 173ರ ಅಡಿಯಲ್ಲಿ ಆರೋಪಿಗಳ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ ಏನು?:ರಾಜ್ಯ ಪೊಲೀಸ್ ನೇಮಕಾತಿ ಮಂಡಳಿಯ ನಿರ್ದೇಶಕರಾಗಿದ್ದ ಅಮೃತ್ ಪೌಲ್ ಅವರು ಸೂಚನೆ ಮೇರೆಗೆ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅಮೃತ್ ಪೌಲ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಅವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಸಿದ್ದರಾಮಯ್ಯ ಅನರ್ಹತೆ ಕೋರಿ ಅರ್ಜಿ: ಸಿಎಂಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ABOUT THE AUTHOR

...view details