ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯ ಕಾಚರನಾಯಕನಹಳ್ಳಿಯಲ್ಲಿ ಖಾಸಗಿಯವರಿಂದ ಒತ್ತುವರಿಯಾಗಿರುವ 67 ಎಕರೆ ಗೋಮಾಳ ಜಮೀನನ್ನು ತೆರವು ಮಾಡಿ ಮುಂದಿನ ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಕಾಚರನಾಯಕನಹಳ್ಳಿಯ ನಿವಾಸಿ ಎನ್. ಜಯಪಾಲರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ. ವರಾಲೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಹಾಜರಾದ ಸರ್ಕಾರದ ಪರ ವಕೀಲರು, ಆನೇಕಲ್ ತಹಶೀಲ್ದಾರ್ ಸಲ್ಲಿಸಿದ್ದ ಪ್ರಮಾಣ ಪತ್ರ ಸಲ್ಲಿಸಿ 67 ಎಕರೆ ಜಮೀನು ಒತ್ತುವರಿ ಮಾಡಲಾಗಿದೆ. ಅಲ್ಲದೆ, 306 ಮನೆಗಳನ್ನು ನಿಮಾಣ ಮಾಡಲಾಗಿದೆ. ಈಗಾಗಲೇ 30 ಮನೆಗಳ ತೆರವು ಮಾಡಲಾಗಿದೆ. ಉಳಿದಂತೆ ಇತರೆ ಮನೆಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.