ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕೆಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಪ್ರಮಾಣದ ರಾಗಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಭಾರಿ ಮಳೆಗೆ ನೆಲಕಚ್ಚಿದ ರಾಗಿ: ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ
ಹೊಸಕೋಟೆ ತಾಲೂಕಿನಲ್ಲಿ ಕೆಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಪ್ರಮಾಣದ ರಾಗಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ ಒಟ್ಟು 21,004 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯುತ್ತಿದ್ದು, ರೈತರು ಎರಡು ಹಂತದಲ್ಲಿ ಬಿತ್ತನೆ ಮಾಡಿದ್ದಾರೆ. ಶೇ.50 ರಷ್ಟು ರೈತರು ಜೂನ್-ಜುಲೈನಲ್ಲಿ ಬಿತ್ತನೆ ಮಾಡಿದರೆ ಉಳಿದವರು ಜುಲೈ-ಆಗಸ್ಟ್‌ನಲ್ಲಿ ಬಿತ್ತಿದ್ದರು. ಈಗ ಮಳೆ ಹೆಚ್ಚಾದ ಪರಿಣಾಮ ಪ್ರಥಮ ಹಂತದ ರೈತರ ಜಮೀನುಗಳಲ್ಲಿನ ಸುಮಾರು 2,700 ಎಕರೆಯಷ್ಟು ಕಟಾವಿಗೆ ಬಂದಿದ್ದ ರಾಗಿ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದಾಗಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ತೀವ್ರ ನಿರಾಸೆಯಾಗಿದೆ. ಆದರೆ, ತಡವಾಗಿ ಬಿತ್ತನೆ ಮಾಡಿರುವ ಪ್ರದೇಶದಲ್ಲಿ ಇದೀಗ ತೆನೆ ಬಂದಿದ್ದು, ಮಳೆ ಸಹಕಾರಿಯಾಗಿದೆ.
ಕಳೆದ ಮೂರು ನಾಲ್ಕು ದಿನಗಳಲ್ಲಿ ಹೊಸಕೋಟೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹೊಸಕೋಟೆ 70.4 ಮಿ.ಮೀ ಸೂಲಿಬೆಲೆ 54.8 ಮಿ.ಮೀ, ಜಡಿಗೇನಹಳ್ಳಿ 35.8, ಮಿ.ಮೀ, ಅನುಗೊಂಡನ ಹಳ್ಳಿ 41,4 ಮಿ.ಮೀ, ನಂದಗುಡಿಯಲ್ಲಿ 27.6 ರಷ್ಟು ಮಳೆಯಾಗಿದೆ.