ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧೆಡೆ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಮಳೆ ಹಿನ್ನೆಲೆ ಶಾಂತಿನಗರದ ರಸ್ತೆಗಳ ತುಂಬೆಲ್ಲಾ ನೀರು ನಿಂತಿತ್ತು. ಅದರಲ್ಲೂ ಶಾಂತಿನಗರದ ಲಾಲ್ ಬಾಗ್ ಡಬಲ್ ರೋಡ್ ಸಂಪೂರ್ಣವಾಗಿ ನೀರಿನಿಂದ ಅವೃತವಾಗಿತ್ತು. ವಾಹನಗಳು ಮುಂದೆ ಹೋಗಲಾರದೆ ಕಾರುಗಳು, ಬೈಕ್ ಗಳು ನಿಂತಲ್ಲೇ ನಿಂತಿದ್ದವು. ಈ ಹಿನ್ನೆಲೆ ವಾಹನ ಸವಾರರು ಮಧ್ಯರಾತ್ರಿಯಾಗುತ್ತಾ ಬಂದರೂ ಪರದಾಡುವಂತಾಯಿತು.
ಕೆರೆಯಂತಾದ ರಸ್ತೆಗಳು...:ನಗರದ ಪ್ರಮುಖ ಜೆ.ಸಿ ರಸ್ತೆಯ ಸುತ್ತ-ಮುತ್ತಲಿನ ಮೋರಿಗಳು ಬ್ಲಾಕ್ ಆಗಿದ್ದು, ರಸ್ತೆಗಳು ಕೆರೆಯಂತಾಗಿದ್ದವು. 3 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟವು.
ಇನ್ನೂ ನಾಲ್ಕು ದಿನ ಮಳೆ:ದೀಪಾವಳಿ ಹಬ್ಬದ ಹಿನ್ನೆಲೆ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಆದರೆ ಸಂಭ್ರಮಕ್ಕೆ ಮಳೆರಾಯ ತಣ್ಣೀರು ಎರಚಿದ್ದಾನೆ. ಇನ್ನೂ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸಹ ಮಾಹಿತಿ ನೀಡಿದೆ.