ದೇವನಹಳ್ಳಿ:ಕೇಂದ್ರ ಸರ್ಕಾರದ ಸಲಹೆ, ಸೂಚನೆಗಳ ಮೇರೆಗೆ ರಾಜ್ಯದಲ್ಲಿ ಕೋವಿಡ್ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಡಾ.ಸುಧಾಕರ್ ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಜನಜಂಗುಳಿ ಇರುವ ಸ್ಥಳಗಳು, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಬೂಸ್ಟರ್ ಡೋಸ್ ತೆಗೆದುಕೊಂಡು ಸುರಕ್ಷಿತವಾಗಿರಬೇಕು. ಸಾರಿ (ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಷನ್) ಲಕ್ಷಣಗಳಿದ್ದರೆ ಅಥವಾ ಶ್ವಾಸಕೋಶದ ಸಮಸ್ಯೆ, ಜ್ವರ ಇದ್ದರೆ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದರು.
ಸರ್ಕಾರ ಜನಪರ ಕ್ರಮಗಳನ್ನು ತೆಗೆದುಕೊಳ್ಳುತಿದೆ. ನಿನ್ನೆ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ನ ನಾಸಲ್ ಸ್ಪ್ರೇ ವ್ಯಾಕ್ಸಿನ್ ಬಳಕೆಗೆ ಹಸಿರು ನಿಶಾನೆ ತೋರಿದೆ. ಇದರಿಂದ ಎಲ್ಲಾ ವಯಸ್ಸಿನವರಿಗೂ ವೇಗವಾಗಿ ವ್ಯಾಕ್ಸಿನ್ ವಿತರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮೂಗಿನ ಮೂಲಕ ಎರಡು ಡ್ರಾಪ್ ವ್ಯಾಕ್ಸಿನ್ ನೀಡಿ ವ್ಯಾಕ್ಸಿನ್ ಕಾರ್ಯವನ್ನು ವೇಗವಾಗಿ ಮುಗಿಸಬಹುದು. ಇದೂ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದಕ್ಕಾಗಿ ನಮ್ಮ ಭಾರತೀಯ ಸಂಶೋಧಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ನಾವು ಹೊಸ ಸಾಧನೆಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದೀಗ ಆ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.