ಹಾನಿಯಾದರೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ಆನೇಕಲ್: ರಾಗಿ ಬಿತ್ತನೆ ತಿಂಗಳ ಮಳೆಗೆ ಅಡ್ಡಿಯಾಗಿತ್ತು. ಆದರೂ ಹೆಚ್ಚು ಫಸಲನ್ನು ರಾಗಿ ಪೈರಿನ ತೆನೆಯಲ್ಲಷ್ಟೇ ಕಾಣಬಹುದಾಗಿತ್ತು. ಆದರೆ ಕಟಾವಿಗೆ ಸತತ ಮಳೆ ತೊಂದರೆ ಕೊಟ್ಟಿದ್ದರಿಂದ ಫಸಲು ರೈತನ ಕೈಗೆ ಬರದಂತಾಗಿದೆ.
ಆನೇಕಲ್ ಹಾಗು ಬೆಂಗಳೂರು ದಕ್ಷಿಣ ತಾಲೂಕುಗಳಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 6445 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಈಗಾಗಲೇ ಶೇಕಡಾ 5 ರಿಂದ 10ರಷ್ಟು ಕಟಾವು ಮಾಡಲಾಗಿದೆ. ಮಾಂಡೌಸ್ ಚಂಡಮಾರುತದಿಂದ ಕಳೆದ ನಾಲ್ಕು ದಿನ 42 ಎಂಎಂ ಮಳೆಯಾಗಿದ್ದು, ಕೆಲವೆಡೆ ರಾಗಿ ತೆನೆ ಮೊಳಕೆಯೊಡೆದು ಹಾಳಾಗಿದೆ.
ಶುಕ್ರವಾರದಿಂದ ಬಿಸಿಲು ಬಂದಿದ್ದು, ಹೀಗೆ ಬಿಸಿಲು ಮುಂದುವರೆದರೆ ವಾರದವರೆಗೆ ರಾಗಿ ಕಟಾವಿಗೆ ತೊಂದರೆಯಾಗುವುದಿಲ್ಲ. ಮತ್ತೆ ಮಳೆಯಾದರೆ ರಾಗಿ ಕಪ್ಪುಕಟ್ಟಿ ಮುಗ್ಗು ಹಿಡಿಯುವ ಸಾಧ್ಯತೆ ಇದೆ.
ರಾಗಿ ಕಟಾವಿಗೆ ಹಾನಿಯಾದರೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೇ:ಕಟಾವಿಗೆ ಮಳೆಯಿಂದ ಹಾನಿಯಾದರೆ ಆನೇಕಲ್ ಹಾಗು ಬೆಂಗಳೂರು ದಕ್ಷಿಣದ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಬೆಳೆ ನಷ್ಟ ಪ್ರಮಾಣದ ಜಂಟಿ ಸರ್ವೇ ನಡೆಸಿ ಪರಿಹಾರ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಧನಂಜಯ್ ತಿಳಿಸಿದ್ದಾರೆ.
ಮುಂದಿನ ಜನವರಿ ಒಂದರಿಂದ ರಾಮಕೃಷ್ಣಾಪುರದ ಕೃಷಿ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರದಲ್ಲಿ ಮಾರ್ಚ್ 31ರವರೆಗೂ ಪ್ರಕ್ರಿಯೆ ಮುಂದುವರೆಯಲಿದ್ದು, ಈ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂಪಾಯಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಒಂದು ಎಕರೆಗೆ 10 ಕ್ವಿಂಟಾಲ್ ನಿಂದ 20 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಒಬ್ಬ ರೈತನಿಗೆ ಅವಕಾಶವಿದೆ ಎಂದು ಮಾರ್ಗಸೂಚಿ ಬಗ್ಗೆ ತಿಳಿಸಿದರು.
ಇದನ್ನೂ ಓದಿ:ಮಾಂಡೌಸ್ ಮಳೆಗೆ ಸಾವಿರಾರು ಎಕರೆಯಲ್ಲಿದ್ದ ರಾಗಿಗೆ ಹಾನಿ: ಆತಂಕದಲ್ಲಿ ರೈತರು