ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾಂಗ್ರೆಸ್ ಸರ್ಕಾರ 'ಕರ್ನಾಟಕವನ್ನು ಕುಡುಕರ ತೋಟ'ವನ್ನಾಗಿ ಮಾಡಲಿದೆ. ಚುನಾವಣೆಗೂ ಮುನ್ನ 'ಸರ್ವಜನಾಂಗದ ಶಾಂತಿಯ ತೋಟ' ಎನ್ನುತ್ತಿದ್ದರು. ಗೆದ್ದ ನಂತರ 'ಕರ್ನಾಟಕ ಕುಡುಕರ ತೋಟ' ಎನ್ನುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಲ್ಪ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಹೆಚ್ಡಿಕೆ ಟ್ವೀಟ್:ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ ವೇದಿಕೆ Xನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆ ಮನೆಗೂ 'ಮದ್ಯಭಾಗ್ಯ' ನೀಡಲು ಹೊರಟಿದೆ. ಸರ್ಕಾರ ಧನಪಿಶಾಚಿ ಅವತಾರವೆತ್ತಿ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ.
ಮುಕ್ತ ಮದ್ಯ ಮಾರಾಟಕ್ಕೆ ಅವಕಾಶ- ಹೆಚ್ಡಿಕೆ ಕಿಡಿ:ಖೊಟ್ಟಿ ಗ್ಯಾರಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತಿ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು. ಅಕ್ಕಿ, ಬೇಳೆ, ದವಸಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವಧಿ. ಇದಾ ಸಮಾಜವಾದ ಎಂದು ಪ್ರಶ್ನಿಸಿದ್ದಾರೆ.