ದೊಡ್ಡಬಳ್ಳಾಪುರ :ಬಿರುಗಾಳಿಯೊಂದಿಗೆ ಸುರಿದ ಭಾರಿ ಮಳೆಗೆ 25 ಎಕರೆಯಲ್ಲಿ ಬೆಳೆದಿದ್ದ ಬೆಂಗಳೂರು ಬ್ಲೂ ದ್ರಾಕ್ಷಿ ನೆಲಕಚ್ಚಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಚಿಕ್ಕಮಂಕಲಾಳ ಗ್ರಾಮದ ರೈತ ಕೆ.ಟಿ. ಕೃಷ್ಣಪ್ಪ ಬೆಳೆದ ಬೆಳೆಯು ಅಕಾಲಿಕ ಆಲಿಕಲ್ಲು ಮಳೆಗೆ ನಾಶವಾಗಿದೆ. ಒಂದು ವಾರದೊಳಗೆ ಫಸಲು ಕಟಾವಾಗಿ ಮಾರುಕಟ್ಟೆಗೆ ಹೋಗಬೇಕಿದ್ದ ದ್ರಾಕ್ಷಿ ಆಲಿಕಲ್ಲು ಮಳೆಯಿಂದ ಹಾನಿಗೊಳಾಗಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಕೃಷ್ಣಪ್ಪ ಸುಮಾರು 25 ಎಕರೆ ಜಾಗದಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಬೆಳೆದಿದ್ದರು. ಈ ಬಾರಿ ಒಳ್ಳೆಯ ಫಸಲು ಸಹ ಬಂದಿತ್ತು, ಸುಮಾರು 250 ಟನ್ ದ್ರಾಕ್ಷಿ ಫಸಲು ಬಂದಿದ್ದು, ಬೆಂಗಳೂರು ಬ್ಲೂ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಹ ಇತ್ತು, ಫಸಲು ನೋಡಿದ ವ್ಯಾಪಾರಿಗಳು ತೋಟಕ್ಕೆ ಬಂದು ಮುಂಗಡವಾಗಿ 40 ಲಕ್ಷ ಹಣ ಕೊಟ್ಟು ದ್ರಾಕ್ಷಿ ಖರೀದಿ ಮಾಡಿದ್ದರು. ಒಂದು ಕೋಟಿಗೂ ಹೆಚ್ಚು ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು ರೈತ ಕೃಷ್ಣಪ್ಪ.