ಸಿಎಂ ಕೋಟಾದಲ್ಲಿ ಅಂಧ ಮಹಿಳೆಗೆ ಸಿಕ್ತು ನಿವೇಶನ ದೊಡ್ಡಬಳ್ಳಾಪುರ: ಅಂಧ ಮಹಿಳೆಗೆ ಆಸರೆ ಸಿಗಲೆಂದು ಸಿಎಂ ಕೋಟಾದಲ್ಲಿ ನಿವೇಶನ ನೀಡಲಾಗಿದೆ. ಸರ್ಕಾರವು ಅನುದಾನದ ಹಣ ಬಿಡುಗಡೆ ಮಾಡುತ್ತೆ ಎಂಬ ನಂಬಿಕೆಯಲ್ಲಿ ಆಕೆ 4 ಲಕ್ಷ ಖರ್ಚು ಮಾಡಿ ಅರ್ಧ ಮನೆ ಕಟ್ಟಿದ್ದಾರೆ. ಆದರೆ 6 ವರ್ಷ ಕಾದರೂ ಸರ್ಕಾರದ ಹಣ ಬಿಡುಗಡೆಯಾಗಿಲ್ಲ. ಇತ್ತ ಕಟ್ಟಿದ ಮನೆಯೂ ಪೂರ್ಣವಾಗದೆ ಬೀಳುವ ಸ್ಥಿತಿಯಲ್ಲಿದೆ.
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಅಂಧ ಮಹಿಳೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸ್ವಂತ ಮನೆಯ ಕನಸು ಕಂಡ ಆಕೆ ಮುಖ್ಯಮಂತ್ರಿ ಕಚೇರಿಗೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ರು. ವಿಶೇಷಚೇತನರಿಗೆ ನೀಡುವ ಮುಖ್ಯಮಂತ್ರಿ ಕೋಟಾದಲ್ಲಿ ನಿವೇಶನ ಮಂಜೂರಾಗಿತ್ತು. 2017ರಲ್ಲಿ 20-30 ಅಳತೆಯ ನಿವೇಶನಕ್ಕೆ ಹಕ್ಕು ಪತ್ರ ನೀಡಲಾಗಿತ್ತು.
ಮನೆ ಕಟ್ಟಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಿಂದ 3.5 ಲಕ್ಷ ಹಣ ಬಿಡುಗಡೆಯಾಗಬೇಕು. ಆದರೆ 5 ವರ್ಷ ಆದರೂ ನಿಗಮದಿಂದ ಹಣ ಬಿಡುಗಡೆಯಾಗಿಲ್ಲ. ನಿಗಮದಿಂದ ಅನುದಾನ ಈಗ ಬಿಡುಗಡೆ ಆಗುತ್ತೆ, ಆಗ ಆಗುತ್ತೆ ಎಂದು ಮಹಿಳೆ ಕಾಯುತ್ತಿದ್ದಾರೆ. ಕೂಡಿಟ್ಟ 4 ಲಕ್ಷ ಹಣದಲ್ಲಿ ಅರ್ಧ ಮನೆ ಕಟ್ಟಿಸಿದ್ದಾರೆ. ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡಿಸಬೇಕು, ಇಲ್ಲದಿದ್ದರೆ ಕಟ್ಟಿರುವ ಗೋಡೆಗಳು ಮಳೆಯಿಂದ ಬೀಳುವ ಸಾಧ್ಯತೆ ಇದೆ.
ಸದ್ಯ ಪುಷ್ಪಲತಾ ರಾಜೀವ್ ಗಾಂಧಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಅರ್ಧ ಮನೆ ಪೂರ್ಣಗೊಳಿಸಲು ಆಕೆಯ ಬಳಿ ನಯಾಪೈಸೆ ದುಡ್ಡಿಲ್ಲ. ಇತ್ತ ಅರ್ಧ ಕಟ್ಟಿರುವ ಮನೆಗೂ ಹೋಗಲು ಸಾಧ್ಯವಾಗದೆ ಆಕೆಯ ಬದುಕು ಅತಂತ್ರವಾಗಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ: ದೂರು ದಾಖಲು