ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಇಡೀ ದಿನ ವಾಸ್ತವ್ಯ ಹೂಡಿತ್ತು. ಆದರೆ ಅವರಿಗೆ ಈ ಅಬಲೆಯ ನೋವು ಕೇಳಿಸಲಿಲ್ಲ. ದುಡಿದು ತಿನ್ನಲು ಅಂಗವೈಕಲ್ಯ ಅಡ್ಡಿ. ಬೀಳುವ ಸ್ಥಿತಿಯಲ್ಲಿರುವ ಮನೆ. ಆಕೆಯ ಕಷ್ಟ ಆಲಿಸದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಕಾಟಚಾರಕ್ಕೆ ನಡೆದಂತೆ ಇತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ದೊಡ್ದಬಳ್ಳಾಪುರ ತಾಲೂಕಿನ ವಡ್ಡರಹಳ್ಳಿಯಲ್ಲಿ ಮೊನ್ನೆ ನಡೆಯಿತು. ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ಪೂರ್ಣ ಕುಂಭದ ಸ್ವಾಗತ, ಜಾನಪದ ತಂಡಗಳೊಂದಿಗೆ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜನರಿದ್ದಲ್ಲಿಗೆ ಆಡಳಿತ ಯಂತ್ರ ತೆಗೆದುಕೊಂಡು ಹೋಗಿ ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶಕ್ಕೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಾರಂಭವಾಯಿತು. ಆದರೆ ವಡ್ಡರಹಳ್ಳಿಯಲ್ಲಿ ಆಗಿದ್ದೇ ಬೇರೆ.
ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ.. ಜನರ ಕಷ್ಟ ಆಲಿಸಿಲ್ಲವೆಂಬ ಆರೋಪ ಸೌಜನ್ಯ ತೋರದ ಅಧಿಕಾರಿಗಳು: ಈ ವಿಕಲಚೇತನ ಮಹಿಳೆಯ ಹೆಸರು ಶಾರದಮ್ಮ. ಎರಡು ವರ್ಷದ ಹಿಂದೆ ಗಂಡ ಬಿಟ್ಟು ಹೋಗಿದ್ದಾನೆ. ಆತ ಬದುಕಿದ್ದಾನೋ ಸತ್ತಿದ್ದಾನೋ ಗೊತ್ತಿಲ್ಲ. ಒಬ್ಬ ಮಗಳನ್ನು ಸಾಕುವ ಜವಾಬ್ದಾರಿ ಮಹಿಳೆಯ ಮೇಲಿದೆ. ದುಡಿದು ತಿನ್ನಲು ಕೈ ಕಾಲುಗಳಲ್ಲಿ ಶಕ್ತಿ ಇಲ್ಲ. ವಿಕಲಚೇತನರಿಗೆ ಕೊಡುವ ಒಂದು ಸಾವಿರ ಪಿಂಚಣಿ ಹಣದಲ್ಲಿ ಅಮ್ಮ ಮಗಳು ಬದುಕಬೇಕು. ಮನೆಯ ಗೋಡೆಯ ಗಾರೆ ಕಳಚಿ ಬಿದ್ದಿದ್ದು ಮನೆ ಸಹ ಬೀಳುವ ಸ್ಥಿತಿಯಲ್ಲಿದೆ. ಇವರ ಕಷ್ಟ ಪರಿಹರಿಸಬೇಕಾದ ಅಧಿಕಾರಿಗಳು ಕಷ್ಟ ಕೇಳುವ ಸೌಜನ್ಯ ಸಹ ತೋರಿಲ್ಲ ಎಂಬುದು ಜನರ ಆರೋಪ.
ಇದು ವಡ್ಡರಹಳ್ಳಿಯ ಒಬ್ಬ ಮಹಿಳೆಯ ಕಥೆಯಲ್ಲ. ಗ್ರಾಮದಲ್ಲಿ 200ಕ್ಕೂ ಹೆಚ್ಚು ದಲಿತರ ಕುಟುಂಬಗಳಿವೆ. 100ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಯೇ ಇಲ್ಲ. ಒಂದೊಂದು ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿವೆ. ಚರಂಡಿ ಸ್ವಚ್ಛ ಮಾಡಿದ ಉದಾಹರಣೆಯೇ ಇಲ್ಲ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಾರೆ ಅಂದುಕೊಂಡಿದ್ವಿ. ಆದರೆ ಅಧಿಕಾರಿಗಳು ನಮ್ಮ ಕಡೆ ಮುಖ ಸಹ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಯಚೂರಿನ ಅರಕೇರಾ ಗ್ರಾಮವಲ್ಲ, ಇನ್ಮೇಲೆ ತಾಲೂಕು: ಸಚಿವ ಆರ್ ಅಶೋಕ್