ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿಯೂ ಶ್ರೀಮಂತ ಪಂಚಾಯಿತಿಗಳ ಸಾಲಿನಲ್ಲಿದ್ದು, ವಿವಾದಗಳ ಸುಳಿಯಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಈಗಾಗಲೇ ದಾಖಲೆ ತಿದ್ದುಪಡಿ, ಕಟ್ಟಡಕ್ಕೆ ಬೆಂಕಿ ಹಾಕಿದ್ದು, ಸಿಬ್ಬಂದಿಗಳ ವಜಾ, ಪೊಲೀಸ್ ದೂರ ಎಂಬುದು ಸರ್ವೆ ಸಾಮಾನ್ಯವಾಗಿದೆ. ಸೋಮವಾರ ನವೀಕೃತ ಕಟ್ಟಡದ ಮುಂದೆ ಗ್ರಾಮ ಪಂಚಾಯಿತಿಯ ಸದಸ್ಯ ಸೋಮಶೇಖರ್ ಅಂಬೇಡ್ಕರ್‌ರವರ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆಯಲ್ಲಿ ನಡೆಸಿದರು. 'ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಶಂಕು ಸ್ಥಾಪನೆಯಾಗದ ಕಾಮಗಾರಿಗೆ ಅಂದಾಜು 1.5 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗಿದೆ' ಎಂದು ಆರೋಪಿಸಿದರು.
ಇತ್ತೀಚೆಗಷ್ಟೇ ನಿರ್ಗಮಿತ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ಕೆ ರೇವಣಪ್ಪರಿಂದ ನವೀಕೃತ ಕಟ್ಟಡದ ಮುಂಭಾಗ ಕಟ್ಟಡ ಉದ್ಘಾಟನೆಯಾದ ನಂತರ ಎರಡನೇ ಶನಿವಾರ ಶಂಕು ಸ್ಥಾಪನೆ ಅಡಿಗಲ್ಲು ಹಾಕಿದ್ದಾರೆ. ಅದರಲ್ಲಿ ನಮೂದು ಮಾಡಿದಂತೆ ಸೆಪ್ಟೆಂಬರ್ 2021ರಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯೂ ಅಸ್ತಿತ್ವದಲ್ಲಿಯೇ ಇರಲಿಲ್ಲ, ಆದರೆ, ಚುನಾಯಿತರ ಹೆಸರು ಹೇಗೆ ಹಾಕಿದರು' ಎಂದು ಅವರು ಪ್ರಶ್ನಿಸಿದರು.
'ಮೂಲ ಸೌಕರ್ಯಗಳಿಗೆ ಬಳಸಬೇಕಾದ ನಿಧಿ-2 ರ ತೆರಿಗೆ ಹಣವನ್ನು ಐಷಾರಾಮಿ ಕಟ್ಟಡ ನಿರ್ಮಾಣಕ್ಕೆ 80 ಲಕ್ಷ ಬಳಸಿದ್ದಾರೆ. 19 ಲಕ್ಷ ನರೇಗಾದ ಹಣವೂ ಬಳಕೆಯಾಗಿದೆ. ಸಾಕಷ್ಟು ದಾನಿಗಳಿಂದಲೂ ಲಕ್ಷಾಂತರ ರೂಪಾಯಿ ಚಂದ ಸಂಗ್ರಹಿಸಲಾಗಿದೆ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಅವರು ಟೀಕಿಸಿದರು.
ಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಕಾಮಗಾರಿಗಳ ಚಾಲನೆ ಮಾಡುವ ಬದಲು, ನಿರ್ಗಮಿತ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳ ಕೊನೆಯ ಕೆಲಸದ ದಿನವೇ ಕಟ್ಟಡ ಉದ್ಘಾಟಿಸಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನುಮತಿ ಬಿಟ್ಟು, ನೇರವಾಗಿ ಜಿಲ್ಲಾ ಪಂಚಾಯತ್ ಸಿಇಒ ಬಳಿಯೇ ಅನುಮತಿ ಪಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ಗ್ರಾಪಂ ಸದಸ್ಯ ದೂರಿದ್ದಾರೆ.