ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್​ನಿಂದ ಚಿನ್ನಾಭರಣ ಕಳವು - ಚಿನ್ನಾಭರಣ

Gold jewelry stolen from vanity bag: ಆಧಾರ್​ ಕಾರ್ಡ್​ ತೋರಿಸಲೆಂದು ಬಸ್​ನಲ್ಲಿ ಬ್ಯಾಗ್​ ಓಪನ್​ ಮಾಡಿದ್ದ ಪುಷ್ಪಾವತಿ ಅವರು ಬಸ್​ ಇಳಿದು ಬ್ಯಾಗ್​ ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ.

Doddaballapur Bus Stand
ದೊಡ್ಡಬಳ್ಳಾಪುರ ಬಸ್​ ನಿಲ್ದಾಣ

By ETV Bharat Karnataka Team

Published : Nov 15, 2023, 3:41 PM IST

Updated : Nov 15, 2023, 7:24 PM IST

ದೊಡ್ಡಬಳ್ಳಾಪುರ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್​ನಿಂದ ಚಿನ್ನಾಭರಣ ಕಳವು

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣ ಮಾಡುವ ವೇಳೆ ಮಹಿಳಾ ಪ್ರಯಾಣಿಕರೊಬ್ಬರು 4.5 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕಂಡಕ್ಟರ್​ಗೆ ಆಧಾರ್​ ಕಾರ್ಡ್ ತೋರಿಸಲೆಂದು ವ್ಯಾನಿಟ್ ಬ್ಯಾಗ್ ಓಪನ್ ಮಾಡಿದ್ದ ಮಹಿಳಾ ಪ್ರಯಾಣಿಕರು, ಬಸ್​ನಿಂದ ಇಳಿದು ವ್ಯಾನಿಟ್ ಬ್ಯಾಗ್​ ನೋಡಿದಾಗ ಚಿನ್ನಾಭರಣ ಕಳ್ಳತನ ಆಗಿರುವುದು ತಿಳಿದಿದೆ.

ದೊಡ್ಡಬಳ್ಳಾಪುರ ತಾಲೂಕಿನ ನೆಲ್ಲುಕುಂಟೆ ಗ್ರಾಮದ ನಿವಾಸಿ ಪುಷ್ಪಾವತಿ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಮಹಿಳೆ. ಉಡುಪಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದ ಅವರು, ಮದುವೆ ಮುಗಿಸಿಕೊಂಡು ನವೆಂಬರ್ 6 ರಂದು ಮನೆಗೆ ವಾಪಸ್ ಆಗುತ್ತಿದ್ದರು. ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಮಾರ್ಗದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದರು. ಉಚಿತ ಪ್ರಯಾಣದ ಟಿಕೆಟ್​ ಪಡೆಯಲು ಆಧಾರ್ ಕಾರ್ಡ್ ಅನ್ನು ಕಂಡಕ್ಟರ್​ಗೆ ತೋರಿಸಲು, ಪುಷ್ಪಾವತಿ ಅವರು ವ್ಯಾನಿಟಿ ಬ್ಯಾಗ್​ ಓಪನ್​ ಮಾಡಿದ್ದರು. ನಂತರ ಆಧಾರ ಕಾರ್ಡ್ ತೋರಿಸಿ ಮತ್ತೆ ಬ್ಯಾಗ್​ನಲ್ಲಿಟ್ಟು, ಬಸ್​ನಲ್ಲಿಯೇ ಕೆಲ ಕ್ಷಣ ನಿದ್ದೆಗೆ ಜಾರಿದ್ದರಂತೆ.

ಬಸ್​ನಿಂದ ಇಳಿದು ವ್ಯಾನಿಟ್ ಬ್ಯಾಗ್ ನೋಡಿದಾಗ ಸುಮಾರು 33 ಗ್ರಾಂ ಚಿನ್ನದ ಲಾಂಗ್ ಚೈನ್, 31 ಗ್ರಾಂ ನೆಕ್ಲೆಸ್, 10 ಗ್ರಾಂ ವಾಲೆ ಜುಮುಕಿ, 8 ಗ್ರಾಂ ಮಾಟಿ, 3 ಗ್ರಾಂನ‌ ಎರಡು ಚಿನ್ನದ ಉಂಗುರಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಚಿನ್ನಾಭರಣ ಕಳವಾಗಿರುವ ವಿಷಯ ಗಂಡನಿಗೆ ತಿಳಿದರೆ ಬೈಯುತ್ತಾರೆ ಎನ್ನುವ ಭಯದಲ್ಲಿ ಅವರು ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 4.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಸ್​ನಲ್ಲಿಯೇ ಕದಿಯಲಾಗಿದೆ ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಪುಷ್ಪಾವತಿ ಅವರದ್ದು ನಾಲ್ಕು ಮಂದಿ ಹೆಣ್ಣು ಮಕ್ಕಳಿರುವ ಕುಟುಂಬ, ಗಂಡ ಅಡುಗೆ ಕೆಲಸ ಮಾಡುತ್ತಾರೆ. ಅಡುಗೆ ಕೆಲಸದಲ್ಲಿ ಬರುವ ಹಣದಲ್ಲಿ ಆಭರಣಗಳನ್ನು ಮಾಡಿಸಿದ್ದರು. ಇದೇ ಆಭರಣಗಳು‌ ಅವರ ಜೀವನಕ್ಕೆ ಆಧಾರವಾಗಿದ್ದವು. ಈಗ ಎಲ್ಲವನ್ನು ಕಳೆದುಕೊಂಡಿರುವುದು ಅವರ ನೋವಿಗೆ ಕಾರಣವಾಗಿದೆ. ಕಳ್ಳತನವಾಗಿರುವ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಮಾಲೀಕರ ಮನೆಯಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ

Last Updated : Nov 15, 2023, 7:24 PM IST

ABOUT THE AUTHOR

...view details