ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಜಿಲ್ಲೆಯಲ್ಲಿ ಜಾನುವಾರುಗಳ ಸಾಕಣೆ ಮತ್ತು ಜಾನುವಾರುಗಳ ಜಾತ್ರೆ, ಸಂತೆ ನಿಷೇಧಿಸಲಾಗಿತ್ತು. ಜಿಲ್ಲಾಡಳಿತದ ನಿಷೇಧದ ನಡುವೆಯು ಘಾಟಿ ದನಗಳ ಜಾತ್ರೆ ಪ್ರಾರಂಭವಾಗಿದ್ದು, ಸ್ವಯಂಪ್ರೇರಿತರಾಗಿ ರೈತರು ದನಗಳ ವ್ಯಾಪಾರಕ್ಕೆ ಘಾಟಿಗೆ ಬರುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿಯನ್ನ ಪಡೆದಿದೆ.
ಘಾಟಿ ದನಗಳ ಜಾತ್ರೆಗೆ ತಮಿಳುನಾಡು, ಆಂಧ್ರಪ್ರದೇಶದ ರೈತರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ದನಗಳ ವ್ಯಾಪಾರಕ್ಕೆ ಘಾಟಿಗೆ ಬರುತ್ತಾರೆ. 2022ರ ಸಾಲಿನ ಘಾಟಿ ದನಗಳ ಜಾತ್ರೆ ಡಿಸೆಂಬರ್ 20 ರಂದು ನಡೆಯಬೇಕಿತ್ತು. ಆದರೆ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ಸಂತೆ, ಜಾತ್ರೆ ಮತ್ತು ಸಾಕಣೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ನವೆಂಬರ್ 30, 2022 ರಿಂದ ಜನವರಿ 31ರವರೆಗೂ ನಿಷೇಧದ ಆದೇಶ ಚಾಲ್ತಿಯಲ್ಲಿತ್ತು. ಆದರೆ, ದನಗಳ ಜಾತ್ರೆಗೆ ಒತ್ತಡ ಹೆಚ್ಚಾದ ಹಿನ್ನೆಲೆ ನಿಷೇಧದ ನಡುವೆಯೂ ದನಗಳ ಜಾತ್ರೆ ಘಾಟಿಯಲ್ಲಿ ಪ್ರಾರಂಭವಾಗಿದೆ.
ಘಾಟಿ ದನಗಳ ಜಾತ್ರೆಗೆ ಬರುವ ರೈತರು:ಜಾನುವಾರುಗಳನ್ನ ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಘಾಟಿ ದನಗಳ ಜಾತ್ರೆಗೆ ಬರುವ ರೈತರು ತಮಗೆ ಬೇಕಾದ ದನಗಳ ಖರೀದಿ ಮಾಡುತ್ತಾರೆ. ಜೊತೆಗೆ ತಾವು ಜೋಡಿ ಮಾಡಿದ ದನಗಳನ್ನ ಮಾರುವ ಮೂಲಕ ಲಾಭ ಸಹ ಗಳಿಸುತ್ತಾರೆ. ಆದರೆ, ಈ ವರ್ಷ ಚರ್ಮಗಂಟು ರೋಗ ಹಿನ್ನೆಲೆ ಘಾಟಿ ದನಗಳ ಜಾತ್ರೆಗೆ ನಿಷೇಧಿಸಲಾಗಿತ್ತು. ಕಳೆದೊಂದು ತಿಂಗಳಿಂದ ಆದೇಶಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದ ರೈತರು ಸ್ವಯಂ ಪ್ರೇರಿತರಾಗಿ ಜನವರಿ 16 ರಿಂದ 23ವರೆಗೂ ದನಗಳ ಜಾತ್ರೆಯನ್ನ ನಡೆಸಿದ್ದಾರೆ. ಈಗಾಗಲೇ ಘಾಟಿಯಲ್ಲಿ ದನಗಳ ಸಂಗಮವಾಗಿವೆ, ದನಗಳ ವ್ಯಾಪಾರಕ್ಕಾಗಿ ದೂರದೂರಿನಿಂದ ರೈತರು ಆಗಮಿಸುತ್ತಿದ್ದಾರೆ.