ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಆಂಧ್ರ ಪ್ರದೇಶದಿಂದ ಬಹಳ ಸುಲಭವಾಗಿ ಗಾಂಜಾ ಸರಬರಾಜು ಮಾಡಿ ಸಣ್ಣ ಸಣ್ಣ ಪ್ಯಾಕೆಟ್ ಮಾಡಿ ಹೋಟೆಲ್, ಪೆಟ್ರೋಲ್ ಬಂಕ್, ಸಿನಿಮಾ ಥಿಯೇಟರ್, ಕಾಲೇಜ್ ಬಳಿ ಈ ಗಾಂಜಾ ಮಾರಾಟವಾಗುತ್ತಿದ್ದುದನ್ನು ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿ 27 ಕೆ.ಜಿ ಗಾಂಜಾ ವಶಕ್ಕೆ ಪಡೆದು ಗಾಂಜಾ ಗ್ಯಾಂಗ್ನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗಾಂಜಾ ನಶೆ ಜೋರಾಗಿತ್ತು. ಗಾಂಜಾ ಚಟಕ್ಕೆ ಕೆಲವು ಯುವಕರು ದಾಸರಾಗಿದ್ದು, ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ದೂರು ಸಹ ಹೋಗಿತ್ತು. ಇದೇ ಸಮಯದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಅವರಿಗೆ ಗಾಂಜಾ ಮಾರಾಟದ ಸುಳಿವು ಸಿಕ್ಕಿದೆ. ಠಾಣೆಯ ಕೂಗಳೆಯ ದೂರದ ಬಸವ ಭವನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಜಿಲಾನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ಪೊಲೀಸರು 900 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಜಿಲಾನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಭಾಗದಿಂದ ದೊಡ್ಡಬಳ್ಳಾಪುರಕ್ಕೆ ಗಾಂಜಾ ಸರಬರಾಜು ಆಗುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.
ಜಿಲಾನ್ ಗೆಳೆಯ ಗಾಂಜಾ ಗ್ಯಾಂಗ್ ನ ಸಹಚರ ಚಂದ್ರಕೀರ್ತಿ ಅಲಿಯಾಸ್ ಆನೆಕಿವಿ ಅದಾಗಲೇ ಗಾಂಜಾ ತರಲಿಕ್ಕೆಂದು ಆಂಧ್ರದ ವಿಶಾಖಪಟ್ಟಣದಲ್ಲಿ ಒಂದು ವಾರದಿಂದ ಬಿಡಾರ ಹಾಕಿದ್ದ. ಚಂದ್ರಕೀರ್ತಿಯ ಮೊಬೈಲ್ ಟ್ರ್ಯಾಪ್ ನಡೆಸಿದ ಪೊಲೀಸರು, 12 ಕೆ.ಜಿ ಗಾಂಜಾ ಸಮೇತ ನಗರದ ಡಿಕ್ರಾಸ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ಜಿಲಾನ್ ಮತ್ತು ಚಂದ್ರಕೀರ್ತಿಯ ವಿಚಾರಣೆ ನಡೆಸಿದಾಗ ಗಾಂಜಾ ಗ್ಯಾಂಗ್ ನಲ್ಲಿದ್ದ ಮುನಿಕೃಷ್ಣ, ವರುಣ್ ಕುಮಾರ್ ಅಲಿಯಾಸ್ ಕೆಂಚ, ಹೇಮಂತ್ ಕುಮಾರ್ ಅಲಿಯಾಸ್ ಗುಂತ, ಪ್ರಬೀನ್ ಕಿಲ್ಲೋ, ತಬ್ರೇಜ್ ಅಲಿಯಾಸ್ ಡೋನು, ಶ್ರೇಯಸ್, ಚರಣ್ ಮತ್ತು ಆಲಶ್ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಗ್ಯಾಂಗ್ನ ಕಿಂಗ್ಪಿನ್ ಒಡಿಶಾದ ಪ್ರಬೀನ್ ಕಿಲ್ಲೋ ಎನ್ನಲಾಗ್ತಿದೆ. ಈತ ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿಭಾಗದಿಂದ ಗಾಂಜಾ ಸಂಗ್ರಹಿಸುತ್ತಿದ್ದ. ಇನ್ನು ಆಂಧ್ರದಿಂದ ಚಂದ್ರಕೀರ್ತಿ ದೊಡ್ಡಬಳ್ಳಾಪುರಕ್ಕೆ ತಂದು ಇದನ್ನು ಕೊಡುತ್ತಿದ್ದ. ನಂತರ ಗ್ಯಾಂಗ್ನ ಸಹಚರರು ಸಣ್ಣ ಸಣ್ಣ ಗಾಂಜಾ ಪ್ಯಾಕೇಟ್ ಮಾಡಿ ದೊಡ್ಡಬಳ್ಳಾಪುರದ ಹೋಟೆಲ್, ಗ್ಯಾರೇಜ್, ಪೆಟ್ರೋಲ್ ಬಂಕ್, ಕಾಲೇಜ್ ಬಳಿ ಮಾರಾಟ ಮಾಡುತ್ತಿದ್ದರು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಗಲು ದೇವರ ಪ್ರತಿಮೆ ಹೊತ್ತು ಗಲ್ಲಿ ಸುತ್ತಾಟ, ರಾತ್ರಿ ಕಳ್ಳತನ.. ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್