ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇದೇ ತಿಂಗಳ 13 ರಿಂದ ದೇವನಹಳ್ಳಿಯ ಕೊಡಗುರ್ಕಿ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆ ಡಬ್ಲ್ಯೂ ಮೆರೆಯೆಟ್ ಹೋಟೆಲ್ನಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇನ್ನು, ಯೂರೋಪಿಯನ್ ಯೂನಿಯನ್ನ 40 ದೇಶಗಳಿಂದ ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದು, ದೇವನಹಳ್ಳಿಯ ನಂದಿಬೆಟ್ಟದ ರಸ್ತೆಗೆ ಡಾಂಬರು ಭಾಗ್ಯ ಒದಗಿಬಂದಿದೆ.
ಜಡಿ ಮಳೆ ನಡುವೆಯೆ ರಸ್ತೆಗೆ ಸಿಬ್ಬಂದಿಗಳು ಡಾಂಬಾರು ಹಾಕುತ್ತಿದ್ದು, ಡಾಂಬಾರು ಹಾಕಿದ ರಸ್ತೆಗೆ ಜಿಟಿ ಜಿಟಿ ಮಳೆ ನಡುವೆ ವೈಟ್ ಟಾಪಿಂಗ್ ಕೂಡ ಮಾಡಲಾಗುತ್ತಿದೆ. ಇನ್ನೂ ಜಿ20 ಶೃಂಗ ಸಭೆಗೆ 40 ದೇಶಗಳ ಗಣ್ಯರು ಆಗಮಿಸಲಿರುವ ಹಿನ್ನೆಲೆ ತರಾತುರಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರೇಸ್ಟಿಜ್ ಗಾಲ್ಪ್ನ ಜೆ ಡಬ್ಲ್ಯೂ ಮ್ಯಾರಿಯೆಟ್ನಲ್ಲಿ ಸಭೆ ನಡೆಯಲಿದ್ದು, ಹಣಕಾಸು ಸಚಿವರು ಸೇರಿದಂತೆ ಹಲವು ಗಣ್ಯರು ಜಿ20 ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದೇ ತಿಂಗಳ 13 ರಿಂದ 17 ರ ವರೆಗು 2 ಸಭೆಗಳು ಹೋಟೆಲ್ನಲ್ಲಿ ನಡೆಯಲಿವೆ. ಇನ್ನು, ಶೃಂಗಸಭೆ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಎಸ್ಪಿ ಎಲ್ಲಾ ರೀತಿಯ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಒಟ್ಟು 700ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜೊತೆಗೆ ಹೋಟೆಲ್ ಸುತ್ತಾಮುತ್ತ 6 ಕಡೆ ಚೆಕ್ ಪೋಸ್ಟಗಳನ್ನು ಮಾಡಲಾಗ್ತಿದೆ. ನಂದಿ ಬೆಟ್ಟಕ್ಕೆ ಹೋಗುವವರಿಗೆ ಹೋಟೆಲ್ ಮುಂಭಾಗ ನಿರ್ಬಂಧ ಮಾಡಲಾಗಿದೆ. ನಂದಿಕ್ರಾಸ್ನಿಂದ ನಂದಿಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಜೆ ಡಬ್ಲ್ಯೂ ಹೋಟೆಲ್ನ ಎಲ್ಲಾ ಕೊಠಡಿಗಳನ್ನು ಜಿ20 ಗಣ್ಯರಿಗಾಗಿ ಬುಕ್ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಹಾಗೆ ಬೇರೆ ಗ್ರಾಹಕರಿಗೆ ಹೋಟೆಲ್ನಲ್ಲಿ 13 ರಿಂದ 17 ರ ವರೆಗೂ ಅವಕಾಶವನ್ನು ನಿರಾಕರಿಸಲಾಗಿದೆ ಎಂದರು.
ಇದನ್ನೂ ಓದಿ:ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ರಾಜ್ಯ ನಂಬರ್ ಒನ್ ಸ್ಥಾನಕ್ಕೆ ಏರಬೇಕು: ಸಿಎಂ