ನೆಲಮಂಗಲ:ವಾಹನ ಸವಾರರು ಸಂಚಾರಿ ನಿಯಮ ಪಾಲಿಸುವತ್ತ ಪೊಲೀಸರ ಸಹಕಾರ ಅತ್ಯಗತ್ಯ ಎಂದು ಅರಿತ ಬೆಂಗಳೂರು ಗ್ರಾಮಾಂತರ ಪೊಲೀಸರು, ಸವಾರರಿಗೆ ಹಲವಾರು ರಿಯಾಯತಿ ಮೇಳಗಳನ್ನು ನಡೆಸುವ ಮೂಲಕ ಸಹಕಾರ ನೀಡುತ್ತಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಆಯೋಜಿಸಿದ್ದ ಶಿಬಿರದ ಯಶಸ್ಸಿನ ನಂತರ ಇದೀಗ ಹೋಬಳಿಗಳ ಸರದಿ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿ ರಿಯಾಯಿತಿ ದರದಲ್ಲಿ ಹೆಲ್ಮೆಟ್ ಹಾಗೂ ಇನ್ಸುರೆನ್ಸ್ ಮೇಳ ಆಯೋಜಿಸಲಾಗಿತ್ತು. ಕೆಲವು ದಿನಗಳ ಹಿಂದೆ ಡಿಎಲ್ಗಾಗಿ ವಾಹನ ಸವಾರರ ದಾಖಲೆ ಪಡೆದು ಡಿಎಲ್ ವಿತರಣೆ ಮಾಡಲಾಗಿತ್ತು. ಬಳಿಕ ರಿಯಾಯತಿ ದರದಲ್ಲಿ ಹೆಲ್ಮೆಟ್ ವಿತರಿಸಿ, ವಾಹನ ಸವಾರರ ಮೆಚ್ಚುಗೆಗೆ ಇಲಾಖೆ ಪಾತ್ರವಾಗಿದೆ.
ಮೇಳದಲ್ಲಿ ಮಾರುಕಟ್ಟೆ ದರದಲ್ಲಿ 1000 ರೂ. ಇರುವ ಹೆಲ್ಮೆಟ್ಗಳನ್ನು 500 ರೂಪಾಯಿಗಳಿಗೆ ನೀಡಲಾಯ್ತು. ಕ್ಯೂನಲ್ಲಿ ನಿಂತ ವಾಹನ ಸವಾರರು ತಮ್ಮ ದಾಖಲೆಗಳನ್ನು ತುಂಬುವಲ್ಲಿ ನಿರತರಾಗಿದ್ದರು.
ರಿಯಾಯಿತಿ ದರದ ಹೆಲ್ಮೆಟ್-ಇನ್ಸುರೆನ್ಸ್ ಮೇಳ ಗ್ರಾಮಾಂತರ ಎಸ್ಪಿ ರವಿ. ಡಿ. ಚನ್ನಣ್ಣನವರ್ ದೂರದೃಷ್ಟಿತ್ವದಿಂದ ರಾಜ್ಯದ ಪ್ರಪ್ರಥಮ ಮೇಳ ನೆಲಮಂಗಲ ತಾಲೂಕಿನಾದ್ಯಂತ ನಡೆಯುತ್ತಿದೆ. ಮೇಳದ ಮೇಲುಸ್ತುವಾರಿಯನ್ನು ತ್ಯಾಮಗೊಂಡ್ಲು ಪಿಎಸ್ಐ ಕೃಷ್ಣಕುಮಾರ್ ಹಾಗೂ ಎಎಸ್ಐ ಶಂಕರಲಿಂಗಯ್ಯ ವಹಿಸಿದ್ದರು.
ಇನ್ನೊಂದೆಡೆ ವಾಹನ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೇಳದಲ್ಲಿ ಡಿಎಲ್ಗಾಗಿ ಸುಮಾರು 1500ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಕ್ಯೂನಲ್ಲಿ ಸುಮಾರು 2000ಕ್ಕೂ ಅಧಿಕ ಸಾರ್ವಜನಿಕರು ನಿಂತಿದ್ದರು. ಇನ್ನೊಂದು ದಿನ ಮೇಳವನ್ನು ವಿಸ್ತರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮುಖ್ಯಾಧಿಕಾರಿಗಳ ಅನುಮತಿ ಪಡೆದು ಮತ್ತೊಂದು ದಿನ ಮೇಳ ನಡೆಸುವ ಚಿಂತನೆಯಲ್ಲಿ ಪೊಲೀಸರಿದ್ದಾರೆ.