ದೊಡ್ಡಬಳ್ಳಾಪುರ:ನಗರಕ್ಕೆ ಡೆಬಿಟ್ ಕಾರ್ಡುಗಳನ್ನು ಬದಲಾಯಿಸಿ ಹಣ ಡ್ರಾ ಮಾಡಿ ಅಮಾಯಕರನ್ನು ವಂಚಿಸುವ ಗ್ಯಾಂಗ್ವೊಂದು ಕಾಲಿಟ್ಟಿದ್ದು, ಕಳೆದೊಂದು ತಿಂಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.
ದೊಡ್ಡಬಳ್ಳಾಪುರ ತಾಲೂಕಿನ ಗೌಡಹಳ್ಳಿಯ ವೆಂಕಟಸ್ವಾಮಿ ಎಂಬುವವರು ತಮ್ಮ ತಂದೆ ಸಿನಪ್ಪನವರ ಕೆನರಾ ಬ್ಯಾಂಕ್ ಖಾತೆಯಲ್ಲಿ 2 ಲಕ್ಷದ 72 ಸಾವಿರ ಹಣ ಇಟ್ಟಿದ್ದರು. ವೆಂಕಟಸ್ವಾಮಿ ಏಪ್ರಿಲ್ 1ರಂದು ನಗರದ ಡಿ ಕ್ರಾಸ್ ಬಳಿಯ ಎಸ್ಬಿಐ ಎಟಿಎಂನಲ್ಲಿ 10 ಸಾವಿರ ಹಣ ಡ್ರಾ ಮಾಡಲೆಂದು ತೆರಳಿದ್ದರು. ಬಹಳ ಹೊತ್ತು ಪ್ರಯತ್ನಿಸಿದರೂ ಹಣ ಡ್ರಾ ಆಗಲಿಲ್ಲ. ಇದರಿಂದ ಬೇಸರಗೊಂಡ ಅವರು, ಜೋರಾಗಿ ಎಟಿಎಂ ಕಾರ್ಡ್ ಹೊರಗೆ ಎಳೆದಿದ್ದಾರೆ. ಇದರಿಂದ ಕಾರ್ಡ್ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಇವರ ಹಿಂದೆಯೇ ನಿಂತಿದ್ದ ವ್ಯಕ್ತಿಯೋರ್ವ ಪಾಸ್ವರ್ಡ್ ತಿಳಿದುಕೊಂಡು, ಸಹಾಯ ಮಾಡುವ ನೆಪದಲ್ಲಿ ಕೆಳಗೆ ಬಿದ್ದಿದ್ದ ಕಾರ್ಡ್ ಎತ್ತಿಕೊಟ್ಟಿದ್ದಾರೆ. ಆದರೆ, ಆತ ವೆಂಕಟಸ್ವಾಮಿಯ ಡೆಬಿಟ್ ಕಾರ್ಡ್ ಬದಲಿಗೆ, ಮತ್ತೊಂದು ಡೆಬಿಟ್ ಕಾರ್ಡ್ ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯ ಹೊತ್ತಿಗೆ ಶಾಂಪಿಗ್ ಮಾಡಿ, ವೆಂಕಟಸ್ವಾಮಿಯವರ ಅಕೌಂಟ್ನಿಂದ 1 ಲಕ್ಷದ 48 ಸಾವಿರ ಹಣ ಖಾಲಿ ಮಾಡಿದ್ದಾರೆ.