ಬೆಂಗಳೂರು ಗ್ರಾಮಾಂತರ : ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಂದು ಕೊರೊನಾ ವೈರಸ್ ಪತ್ತೆಯಾದ ನಾಲ್ವರಲ್ಲಿ, ಇಬ್ಬರು ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕ ಹೊಂದಿದ್ದು, ಒಬ್ಬರು ದ್ವಿತೀಯ ಸಂಪರ್ಕ ಹೊಂದಿದ್ದವರಾಗಿದ್ದಾರೆ. ಹಾಗೂ ಇನ್ನೊಬ್ಬರ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಹೊಸಕೋಟೆ ನಗರದ ನಿವಾಸಿಗಳಾದ 35 ವರ್ಷದ ಮಹಿಳೆ (ಪಿ-8544), ಪಿ-7578 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಹಾಗೂ 30 ವರ್ಷದ ಮಹಿಳೆಗೆ (ಪಿ-8545) ಪಿ-7578 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ.
ನೆಲಮಂಗಲ ತಾಲೂಕಿನ ವಾಜರಹಳ್ಳಿಯ ನಿವಾಸಿ 37 ವರ್ಷದ ಪುರುಷನ (ಪಿ-8546) ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಮತ್ತು ನೆಲಮಂಗಲ ನಗರದ ನಿವಾಸಿ 47 ವರ್ಷದ ಮಹಿಳೆ (ಪಿ-8547), ಅವರು (ಪಿ-7578) ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದು ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಇನ್ನು ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.