ನೆಲಮಂಗಲ:ಮತ್ತೊಬ್ಬ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದ ಪ್ರಿಯತಮೆ 5 ವರ್ಷದಿಂದ ಪ್ರೀತಿಸುತ್ತಿದ್ದ ತನ್ನ ಪ್ರಿಯಕರನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 5ರಂದು ಮಾದಾವರ ನವಿಲೇ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಕಿರಣ್ ಕುಮಾರ್ ಎಂಬಾತನ ಕುತ್ತಿಗೆ, ಎದೆಗೆ ಚುಚ್ಚಿ ಕೊಲೆಗೆ ಯತ್ನಿಸಲಾಗಿತ್ತು. ಬಳಿಕ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಕೊಲೆಗೆ ಸುಪಾರಿ:
ಯುವತಿ ಶ್ವೇತಾ ಮತ್ತು ಕಿರಣ್ ಕುಮಾರ್ ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಡೇವಿಡ್ ಎಂಬಾತ ಪರಿಚಯವಾಗಿದ್ದು, ದಿನಕಳೆದಂತೆ ಶ್ವೇತಾ ಡೇವಿಡ್ ಜೊತೆ ಸಲುಗೆ ಬೆಳೆಸಿದ್ದಾಳೆ. ಆದರೆ, ಶ್ವೇತಾ ಮತ್ತು ಡೇವಿಡ್ ಜೊತೆಯಾಗಿರಲು ಕಿರಣ್ ಕುಮಾರ್ ಮುಳುವಾಗಿದ್ದ. ಈ ಕಾರಣದಿಂದ ಸುಪಾರಿ ಕೊಟ್ಟು ಕಿರಣ್ ಕೊಲೆ ಮಾಡಲು ಇಬ್ಬರೂ ಸೇರಿ ಯೋಜನೆ ರೂಪಿಸಿದ್ದರು.
ಶ್ವೇತಾ ಮತ್ತು ಕಿರಣ್ ಕುಮಾರ್ ಕೊಲೆಗೆ ಸ್ಕೆಚ್ ಹಾಕಿದ ಡೇವಿಡ್ ತನ್ನ ಜೊತೆ ಶ್ರೀಕಾಂತ್ ಮತ್ತು ದಿನೇಶ್ ಎಂಬುವರನ್ನು ಸೇರಿಸಿಕೊಂಡಿದ್ದ. ಅಲ್ಲದೇ ಶ್ರೀಕಾಂತ್ ಮತ್ತು ದಿನೇಶ್ ಜೊತೆ ಒಟ್ಟು 1 ಲಕ್ಷ ರೂಪಾಯಿಗೆ ಡೀಲ್ ಮಾತನಾಡಿಕೊಂಡ ಡೇವಿಡ್, 10 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿದ್ದ.
ಪ್ರಿಯತಮೆಯಿಂದಲೇ ಮಾಹಿತಿ:
ಕಿರಣ್ ಕುಮಾರ್ ಚಲನವಲನದ ಬಗ್ಗೆ ಅರಿತಿದ್ದ ಶ್ವೇತಾ ಆರೋಪಿಗಳಿಗೆ ಎಲ್ಲ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಮೇರೆಗೆ ಡೇವಿಡ್ ಸೂಚನೆಯಂತೆ ಶ್ರೀಕಾಂತ್ ಮತ್ತು ದಿನೇಶ್ ಕಿರಣ್ ಮೇಲೆ ಅಟ್ಯಾಕ್ ಮಾಡಿದ್ದರು. ಮಾದಾವರ ನವಿಲೇ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಕಿರಣ್ ಕುಮಾರ್ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ. ನಂತರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಸಿಸಿಟಿವಿಯಲ್ಲಿ ಬೈಕ್ ಚಲನವಲನ ಆಧರಿಸಿ ತನಿಖೆ ನಡೆಸಿತ್ತು. ಬಳಿಕ ಯುವತಿ ಶ್ವೇತಾಳನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ ಕೃತ್ಯದ ಅಸಲಿಯತ್ತು ಹೊರ ಬಿದ್ದಿದೆ. ಪ್ರಕರಣ ಸಂಬಂಧ ನಾಲ್ವರನ್ನೂ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಮಚ್ಚಿನಿಂದ ಕೊಂದ ಪಾಪಿ ಪುತ್ರ