ದೊಡ್ಡಬಳ್ಳಾಪುರ (ಬೆಂ.ಗ್ರಾ): ಕೊರೊನಾ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿಯವರಿಗೆ 56 ಇಂಚಿನ ಎದೆ ಇದ್ದರೆ ಪ್ರಯೋಜನವಿಲ್ಲ. ಆ ಎದೆಯಲ್ಲಿ ಮಾತೃ ಹೃದಯವಂತಿಕೆ ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್ 2ನೇ ಅಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಜನಪರ ಕಾಳಜಿ ಉಳ್ಳ ವ್ಯಕ್ತಿ ವೆಂಕಟರಮಣಯ್ಯ ಶಾಸಕರಾಗಿ ದೊಡ್ಡಬಳ್ಳಾಪುರಕ್ಕೆ ದೊರೆತಿದ್ದಾರೆ. ಕಷ್ಟ ಕಾಲದಲ್ಲಿ ಎಲ್ಲರಿಗೂ ನೆರವು ನೀಡುವ ಮನಸ್ಸು ಇರುವುದಿಲ್ಲ. ಆದರೆ, ವೆಂಕಟರಮಣಯ್ಯ ತಾಲೂಕಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಕೊರೊನಾ ಇಡೀ ವಿಶ್ವವನ್ನೇ ಕಾಡಿದ ಮಾರಿಯಾಗಿದೆ. ಹೀಗಾಗಿ, ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಚಾಲಕರು, ಕಾರ್ಮಿಕರು, ರೈತರೂ ಸೇರಿದಂತೆ ಎಲ್ಲರಿಗೂ 10 ಸಾವಿರ ಹಣ, 10 ಕೆಜಿ ಅಕ್ಕಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಲಹೆ ನೀಡಿದೆ. ಆದರೆ, ಅವರು ಕೇಳಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಜನರ ಕಷ್ಟ ಅರಿವಾಗುತ್ತಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಕೆ ಯಾರ ಕಾಲದಲ್ಲೂ ಇಷ್ಟು ಏರೆಕೆ ಕಂಡಿರಲ್ಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.