ನೆಲಮಂಗಲ:ರಾಜಕೀಯವಾಗಿ ತಾತ್ಕಾಲಿಕವಾಗಿ ನಾಲ್ಕು ಜನಗಳಿಗೆ ಖುಷಿ ಕೊಡಲು ಪ್ರಾಧಿಕಾರ ನಿರ್ಮಾಣ ಮಾಡೋದ್ರಿಂದ ಯಾವುದೇ ಅಭಿವೃದ್ಧಿ ಆಗೋದಿಲ್ಲ ಎಂದು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕವಾಗಿ ನಾಲ್ಕು ಜನಗಳಿಗೆ ಖುಷಿ ಕೊಡಲು ಪ್ರಾಧಿಕಾರ ರಚನೆಯಿಂದ ಯಾವುದೇ ಅಭಿವೃದ್ಧಿ ಆಗಲ್ಲ: ಹೆಚ್ಡಿಕೆ - Maratha Development Corporation
ನಗರದಲ್ಲಿ ನೂತನ ಕಣ್ಣಿನ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದರು.
ನಗರದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಅನಂತಾಕ್ಷ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಸ್ ನಿಲ್ದಾಣದ ಹತ್ತಿರ ಇಂಥದ್ದೊಂದು ಆಸ್ಪತ್ರೆ ಇರುವುದರಿಂದ ಸುತ್ತಮುತ್ತಲ ಈ ಭಾಗದ ಜನರಿಗೆ ಬಹಳ ಅನುಕೂಲಕರವಾಗಲಿದೆ. ದಿನೇ ದಿನೆ ನೆಲಮಂಗಲ ನಗರ ನಾಗಾಲೋಟದಲ್ಲಿ ಬೆಳೆಯುತ್ತಿದೆ. ತಾಲೂಕಿನ ಜನತೆ ತಮ್ಮ ಕಣ್ಣಿನ ಸಮಸ್ಯೆಗಳನ್ನು ತೋರಿಸಿಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಇದೀಗ ಇಂಥದ್ದೊಂದು ಕಣ್ಣಿನ ಆಸ್ಪತ್ರೆಯನ್ನು ನೂತನವಾಗಿ ಪ್ರಾರಂಭ ಮಾಡಿರುವುದು ತುಂಬಾ ಒಳ್ಳೆಯ ವಿಚಾರ ಎಂದರು.
ನಂತರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಂಇಎಸ್ ಸಂಘಟನೆ ವಿರೋಧ ವಿಚಾರದ ಬಗ್ಗೆ ಮಾತನಾಡಿ, ಅಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ನಾನು ಮಾತನಾಡೋದಿಲ್ಲ, ಜನ ಮಾತಾಡ್ತಾರೆ. ಇದೆಲ್ಲ ಉಪಯೋಗಕ್ಕೆ ಬರುತ್ತೋ ಇಲ್ವೋ ಅನ್ನೋದು ಈಗಾಗ್ಲೆ ಪ್ರಾರಂಭವಾಗಿರುವ ಇತರೆ ಪ್ರಾಧಿಕಾರಗಳನ್ನ ನೋಡಿದ್ರೆ ಗೊತ್ತಾಗುತ್ತೆ. ಜಾತಿ ಹಾಗೂ ಇನ್ನಿತರ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ ಪ್ರಾಧಿಕಾರಗಳಿಂದ ಆ ಸಮಾಜದ ಬಡವರಿಗೆ ಎಷ್ಟು ಅನುಕೂಲವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯವಾಗಿ ತಾತ್ಕಾಲಿಕವಾಗಿ ನಾಲ್ಕು ಜನಗಳಿಗೆ ಖುಷಿ ಕೊಡಲು ಪ್ರಾಧಿಕಾರ ನಿರ್ಮಾಣ ಮಾಡೋದ್ರಿಂದ ಯಾವುದೇ ಅಭಿವೃದ್ಧಿ ಆಗೋದಿಲ್ಲ. ಸರ್ಕಾರದ ನಿಜವಾದ ಜವಾಬ್ದಾರಿ ಜನರ ನಿಜವಾದ ಸಮಸ್ಯೆ ಏನಿದೆ, ಜನರ ತೆರಿಗೆ ಹಣ ಯಾವ ರೀತಿ ಬಳಕೆ ಮಾಡಬೇಕು ಎಂಬುದಿರಬೇಕು. ಸಕಾರಾತ್ಮಕ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಕೊಡಬೇಕು. ತಾತ್ಕಾಲಿಕವಾಗಿ ಯಾರನ್ನೋ ಖುಷಿಪಡಿಸಲು ಅಪಘಾತ ಮಾಡಿಕೊಂಡ್ರೆ ನಾವೇನು ಮಾಡೋಕೆ ಆಗುತ್ತೆ ಎಂದರು.