ದೇವನಹಳ್ಳಿ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು, ಅದೇ ದ್ವೇಷದಿಂದ ಮನೆಗೆ ಡೀಸೆಲ್ ಸುರಿದು ಬೆಂಕಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಗ್ರಾಮದ ಪೆಮ್ಮರೆಡ್ಡಿ ಎಂಬುವರಿಗೆ ಸೇರಿದ ಮನೆಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ ಸೇರಿದಂತೆ ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮನೆಗೆ ಡಿಸೇಲ್ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು ಪೆಮ್ಮರೆಡ್ಡಿ ತಂದೆ ಕೆ. ವೆಂಕಟಪ್ಪ ಮತ್ತು ಮುನಿವೆಂಕಟಪ್ಪ ಎಂಬುವವರಿಗೆ ಸೇರಿದ ಜಂಟಿ 4 ಎಕರೆ 34 ಗುಂಟೆ ಜಮೀನು ಇದ್ದು, ಇದರಲ್ಲಿ ಮುನಿವೆಂಕಟಪ್ಪ ಎಂಬುವರು 2 ಎಕರೆ 17 ಗುಂಟೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಸರ್ವೇ ನಂ. 164 ರಲ್ಲಿನ ಜಮೀನಿನಲ್ಲಿ ಆ 2 ಎಕರೆ 17 ಗುಂಟೆ ಜಮೀನನ್ನು ಪೆಮ್ಮರೆಡ್ಡಿ ಖರೀದಿ ಮಾಡಿದ್ದರು.
ಓದಿ:ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದ ; ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!
ಜಮೀನು ಖರೀದಿ ವಿಚಾರಕ್ಕೆ ಪೆಮ್ಮರೆಡ್ಡಿ ಮತ್ತು ಮುನಿವೆಂಕಟಪ್ಪ ನಡುವೆ ಜಗಳವಾಗಿ ಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕಳೆದ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ. ಮುನಿವೆಂಕಟಪ್ಪ ಕಡೆಯವರಾದ ರಘು, ಕಿರಣ್, ವಸಂತ್ ಎಂಬುವವರು ಮನೆಗೆ ಬೆಂಕಿ ಹಚ್ಚಿದ್ದಾರೆಂಬುದು ಪೆಮ್ಮರೆಡ್ಡಿಯವರ ಆರೋಪವಾಗಿದೆ. ಸದ್ಯ ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.