ದೊಡ್ಡಬಳ್ಳಾಪುರ:ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಕಂಟನಕುಂಟೆ ಗ್ರಾಮದಲ್ಲಿ 9 ತಿಂಗಳ ಅವಧಿಯಲ್ಲಿ 9 ಅಪಘಾತಗಳು ಸಂಭವಿಸಿದ್ದು, ಗ್ರಾಮದ ಐವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಸ್ನೇಹಿತರ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್ನ್ನು ಸ್ನೇಹಿತರ ಬಳಗ ಆಯೋಜಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಮಧ್ಯದಲ್ಲಿ ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ರಸ್ತೆ ಅಭಿವೃದ್ಧಿಯ ನಂತರ ಗ್ರಾಮದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮದ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟುವ ಸಮಯದಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಅಪಘಾತಗಳಲ್ಲಿ ಗ್ರಾಮದ ಯುವಕರು ಸಾವನ್ನಪ್ಪಿದ್ದಾರೆ. ಹೆದ್ದಾರಿಗೆ ಸ್ಕೈವಾಕ್ ನಿರ್ಮಿಸುವಂತೆ ಮತ್ತು ಸರ್ವಿಸ್ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ರಸ್ತೆ ತಡೆದು ಹೋರಾಟ ಸಹ ನಡೆಸಿದ್ದಾರೆ.