ದೇವನಹಳ್ಳಿ: ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆಯಲ್ಲಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದ ಕಾರ್ಮಿಕರಲ್ಲಿ ಇಂದು ಮತ್ತೆ ಇಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಮಾರ್ಚ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ, ಕಾರ್ಖಾನೆ ಕೆಲಸಕ್ಕೆಂದು ಬರುವ ಕಾರ್ಮಿಕರಿಗೆ ಗುತ್ತಿಗೆದಾರರು ನೀಡುವ ಕೊಠಡಿಯಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿತ್ತು. ಹೊಸಕೋಟೆಯ ತಿರುಮಲಶೆಟ್ಟಿ ಹಳ್ಳಿ ಹಾಗೂ ಅನುಗೊಂಡನಹಳ್ಳಿ ಸುತ್ತಮುತ್ತ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನ ಕೂಲಿ ಕಾರ್ಮಿಕರು ಬರುತ್ತಾರೆ.
ಹೀಗೆ ಕಳೆದ ಮೂರು ತಿಂಗಳ ಹಿಂದೆ ಬಿಹಾರ ಹಾಗೂ ಉತ್ತರಪ್ರದೇಶದಿಂದ ಬಂದ ಎಂಟು ಜನ ಕಾರ್ಮಿಕರು, ಗುತ್ತಿಗೆದಾರರು ನೀಡಿದ ಶೆಡ್ನಲ್ಲಿ ವಾಸವಿದ್ದರು. ಕಾರ್ಮಿಕರಿಗೆ ಅಡುಗೆ ಮಾಡಿಕೊಳ್ಳಲು ಸ್ವತಃ ಗುತ್ತಿಗೆದಾರರೇ ಒಂದು ಗ್ಯಾಸ್ಸ್ಟೌ ಕೂಡ ಕೊಟ್ಟಿದ್ದರು. ಕಳೆದ ಭಾನುವಾರ ರಾತ್ರಿ ಶೆಡ್ನಲ್ಲಿ ಕಾರ್ಮಿಕರು ಅಡುಗೆ ಮಾಡಿ, ಊಟ ಮಾಡಿ ವಿಶ್ರಾಂತಿಗೆ ಮರಳಿದ್ದಾರೆ. ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಸಮಯದಲ್ಲಿ ಗ್ಯಾಸ್ ಸೋರಿಕೆ ಆಗಿದೆ.