ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಟೋಲ್ಗಳಲ್ಲಿ ವಂಚನೆ, ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಡಿಜಿಟಲೀಕರಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಫಾಸ್ಟ್ಯಾಗ್ ಅನ್ನು ಜಾರಿಗೆ ತಂದಿದೆ. ಆದರೆ, ಟೋಲ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಾನಾ ಸಮಸ್ಯೆಗಳಿಂದ ಸುಂಕ ಕಟ್ಟಲು ಸರದಿ ಸಾಲಿನಲ್ಲಿ ಸವಾರರು ಪಡಿಪಾಟಲು ಬೀಳುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ಗಳ ಫಾಸ್ಟ್ಯಾಗ್ನಲ್ಲಿ ಆಗಾಗ್ಗೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ನಗದು ಶುಲ್ಕ ಪಾವತಿಸಿ ಮುಂದೆ ಸಾಗಬೇಕಿದೆ. ಆದರೆ, ಇದರಿಂದಾಗಿ ಬಹಳ ವಿಳಂಬವಾಗುತ್ತಿದ್ದು, ಕಿಲೋ ಮೀಟರ್ಗಟ್ಟಲೇ ಬೆಂಕಿ ಪೊಟ್ಟಣದಲ್ಲಿ ಕಡ್ಡಿಗಳನ್ನು ಒತ್ತೊತ್ತಾಗಿ ಜೋಡಿಸಿದ ಹಾಗೆ ದಟ್ಟಣೆ ಉಂಟಾಗಿರುತ್ತದೆ. ವಾರಾಂತ್ಯ ಮತ್ತು ಹಬ್ಬ ಹರಿದಿನಗಳಲ್ಲಿ ಅದು ಮತ್ತಷ್ಟು ಸಮಸ್ಯೆ ಉದ್ಬವವಾಗಿರುತ್ತದೆ.
ನಗದು ಪಾವತಿಸುವಾಗಲು ಸಹ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಚಿಲ್ಲರೆ ಹಿಂತಿರುಗಿಸುವಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಟೋಲ್ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಗಲಾಟೆ, ಗದ್ದಲ ನಡೆದಿವೆ. ಟೋಲ್ಗೇಟ್ಗಳು ತೆರೆದುಕೊಳ್ಳುವಾಗಲೂ ಸಹ ತಡವಾಗುತ್ತಿದೆ. ದಟ್ಟಣೆಯಿಂದ ಆ್ಯಂಬುಲೆನ್ಸ್ ಮತ್ತು ತುರ್ತು ಸೇವೆಗಳಿಗೆ ಅಡ್ಡಿಯಾಗುತ್ತಿದೆ. ಹಳ್ಳಿಗಳಿಂದ ಬರುವ ಎಷ್ಟೋ ಮಂದಿಗೆ ಫಾಸ್ಟ್ಯಾಗ್‌ನ ಅರಿವೇ ಇರುವುದಿಲ್ಲ. ಇದು ಕೂಡ ಸಮಸ್ಯೆಗೆ ಪ್ರಮುಖ ಕಾರಣ.
ರಾಷ್ಟ್ರೀಯ ಹೆದ್ದಾರಿ-7 ಸಾದಹಳ್ಳಿ ಬಳಿ ಟೋಲ್ ಫ್ಲಾಜಾ ಇದೆ. ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಟೋಲ್ನಲ್ಲಿ ಮೂಲಕವೇ ಹಾದು ಹೋಗಬೇಕು. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಜನವರಿ 15ರಿಂದ ಫಾಸ್ಟ್ಯಾಗ್ ಅನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಶೇ.50 ಮಂದಿ ಅದನ್ನು ಅಳವಡಿಸಿಕೊಂಡಿಲ್ಲ. ಸರದಿ ಸಾಲಿನಲ್ಲಿ ನಿಲ್ಲುವ ವಾಹನಗಳಿಂದ ಇಂಧನ ಮತ್ತು ಸಮಯ ವ್ಯರ್ಥವಾಗುತ್ತಿದೆ.
ಟೋಲ್ಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಎರಡೆರಡು ಬಾರಿ ಹಣ ಪಾವತಿ:ಟೋಲ್‌ಬೂತ್‌ಗಳ ಫಾಸ್ಟ್ಯಾಗ್ ಲೇನ್‌ನಲ್ಲಿ ರೀಡರ್ ಇರುತ್ತದೆ. ಆ ಲೇನ್ ಅನ್ನು ವಾಹನ ಹಾದು ಹೋದಾಗ ಅದರಲ್ಲಿರುವ ಫಾಸ್ಟ್ಯಾಗ್ ಅನ್ನು ರೀಡರ್, ರೀಡ್ ಮಾಡಲಿದೆ. ಆ ಫಾಸ್ಟ್ಯಾಗ್‌ನ ಖಾತೆಯಿಂದ ಶುಲ್ಕ ಪಾವತಿ ಆಗಲಿದೆ. ಆದರೆ, ಈ ಸಂದರ್ಭದಲ್ಲಿ ರೀಡ್ ಮಾಡುವಾಗ ವಾಹನ ಹಿಂದಕ್ಕೆ ಮುಂದಕ್ಕೆ ಸರ್ಕಸ್ಸ್ ಮಾಡಬೇಕು. ಇದರಿಂದ ಮೊದಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಟ್ಯಾಗ್ ರೀಡ್ ಮಾಡದಿದ್ದಾಗ ನಗದು ಪಾವತಿಸಿ ಮುಂದಕ್ಕೆ ಹೋಗಬೇಕು. ಮತ್ತೊಂದು ದುರಂತ ಎಂದರೆ ಅಲ್ಲಿಂದ ಕಿ.ಮೀ ದೂರ ಹೋದ ಬಳಿಕ ಚಾಲಕನ ಮೊಬೈಲ್ಗೆ ಸುಂಕ ಕಡಿತವಾಗಿರುವ ಸಂದೇಶ ಬರುತ್ತಿದೆ. ಹೀಗಾಗಿ, ಎರಡು ಬಾರಿ ಹಣ ಕಟ್ಟಿದಂತಾಗುತ್ತಿದೆ. ಚಾಲಕರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸವಾರರು ಒತ್ತಾಯಿಸಿದ್ದಾರೆ.
ಹೋಗುವಾಗ ಮತ್ತು ಬರುವಾಗ ಸುಂಕ:ಫಾಸ್ಟ್ಯಾಗ್ಗೂ ಮುನ್ನ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಬಂದು-ಹೋಗಲು ಒಮ್ಮೆ ಟೋಲ್ ಸುಂಕ ಕಟ್ಟಿದ್ದರೆ ಸಾಕಿತ್ತು. ಆದರೀಗ ಬರುವಾಗ ಮತ್ತು ಹೋಗುವಾಗಲೂ ಹಣ ಕಡಿತವಾಗತ್ತದೆ. ಈ ಮೂಲಕ ಜನರಿಂದ ದುಪ್ಪಟ್ಟು ಹಣ ಪೀಕಲಾಗುತ್ತಿದೆ. ಡಿಜಜಿಟಲೀಕರಣಕ್ಕೆ ಒತ್ತು ನೀಡಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಫಾಸ್ಟ್ಯಾಗ್ ಜಾರಿಗೆ ಬಂದು 8 ತಿಂಗಳಾಗಿದೆ. ಆದರೆ, ಈವರೆಗೂ ಅದು ಅವ್ಯವಸ್ಠೆಯಿಂದಲೇ ಕೂಡಿದೆ. ಶೇ.80ರಷ್ಟು ಸುಧಾರಣೆಯಾಗಬೇಕಿದೆ.