ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಉಚಿತ ಎಂದಾಗ ಬೆಳೆಗೆ ಕ್ರಿಮಿನಾಶಕ ಬಳಸಿದ ರೈತ.. ಟೊಮೆಟೊ ನಾಶವಾಗಿ ಭಾರಿ ಆಘಾತ - ಈಟಿವಿ ಭಾರತ್ ಕನ್ನಡ ಸುದ್ದಿ

ಖಾಸಗಿ ಕಂಪೆನಿಯ ಕ್ರಿಮಿನಾಶಕ ಸಿಂಪಡಣೆಯಿಂದ ಟೊಮೆಟೊ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ರೈತರೊಬ್ಬರು ಆರೋಪಿಸಿದ್ದಾರೆ.

farmers-tomato-crop-worth-25-lakhs-destroyed-by-pesticide-spraying
ಉಚಿತ ಎಂದಾಗ ಬೆಳೆಗೆ ಕ್ರಿಮಿನಾಶಕ ಬಳಸಿದ ರೈತ.. ಟೊಮೆಟೊ ನಾಶ

By

Published : Aug 2, 2023, 7:27 PM IST

Updated : Aug 3, 2023, 1:13 PM IST

ಕ್ರಿಮಿನಾಶಕ ಸಿಂಪಡಣೆಯಿಂದ ಬೆಳೆ ನಾಶ

ದೊಡ್ಡಬಳ್ಳಾಪುರ :ಟೊಮೆಟೊಗೆ ಇವತ್ತು ಚಿನ್ನದ ಬೆಲೆ. ಉತ್ತಮ ಬೆಲೆ ಸಿಗುವ ಸಮಯಕ್ಕೆ ಟೊಮೆಟೊ ಬೆಳೆಯ ಭರ್ಜರಿ ಫಸಲು ಬಂದಿತ್ತು. ಆದರೆ, ಕಂಪನಿಯೊಂದರ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದರಿಂದ ತಾಲೂಕಿನಲ್ಲಿ ಇಡೀ ಟೊಮೆಟೊ ಬೆಳೆ ಒಣಗಿನಿಂತಿದೆ ಎಂದು ರೈತರು ಆರೋಪಿಸಿದ್ದಾರೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಅಡುಗೆ ಮನೆಯ ರಾಣಿ, ಕೆಂಪು ಸುಂದರಿ ಎಂದೇ ಟೊಮೆಟೊ ಪ್ರಸಿದ್ಧಿ ಪಡೆದಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಗೆ ಬಂಗಾರದ ಬೆಲೆ ಇದೆ. ಇವತ್ತು ಟೊಮೆಟೊ ಬೆಳೆದವನೇ ಸಿರಿವಂತ ಅನ್ನುವ ಮಾತುಗಳು ಸಹ ಶುರುವಾಗಿವೆ. ಆದರೆ, ತಾಲೂಕಿನಲ್ಲಿ ರೈತರೊಬ್ಬರು ಟೊಮೆಟೊ ಬೆಳೆದ್ರು ಸಹ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗಿಡ್ಡೇಗೌಡ ನಷ್ಟ ಅನುಭವಿಸಿದ ರೈತ. ಈ ಕುರಿತು ಮಾತನಾಡಿರುವ ಅವರು, ''ಒಂದು ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದೇವೆ. ಹುಲುಸಾಗಿ ಬೆಳೆದಿದ್ದ ಟೊಮೆಟೊ ಹೂಬಿಟ್ಟು ಫಸಲು ಕೊಡಲು ಪ್ರಾರಂಭಿಸಿತ್ತು. ಆದರೆ ಇದೇ ಸಮಯಕ್ಕೆ ಖಾಸಗಿ ಕಂಪನಿಯ ಕ್ರಿಮಿನಾಶಕ ಔಷಧಿಯ ಪ್ರತಿನಿಧಿ ನಮ್ಮನ್ನು ಭೇಟಿ ಮಾಡಿ, ಉಚಿತವಾಗಿ ಕ್ರಿಮಿನಾಶಕ ಔಷಧಿ ಕೊಡುತ್ತೇವೆ. ಗಿಡಗಳಿಗೆ ಸಿಂಪಡಣೆ ಮಾಡಿ ಭರ್ಜರಿ ಫಸಲು ಬರುತ್ತೆ ಹೇಳಿದ್ದರು. ಈಗ ಎಲ್ಲವೂ ಹಾಳಾಗಿದೆ'' ಎಂದು ಅಳಲು ತೋಡಿಕೊಂಡಿದ್ದಾರೆ.

ಒಂದು ಎಕರೆಯ ಟೊಮೆಟೊ ಬೆಳೆ ನಾಶ:''ಉಚಿತ ಔಷಧಿ ಅಂತಾ ಹೇಳಿದ್ದಕ್ಕೆ ಖಾಸಗಿ ಕಂಪನಿಯ ಕ್ರಿಮಿನಾಶಕವನ್ನು ನಮ್ಮ ಜಮೀನಿನಲ್ಲಿ ಬೆಳೆದ ಟೊಮೆಟೊಗೆ ಸಿಂಪಡಣೆ ಮಾಡಿದ್ದೇವೆ. ಕ್ರಿಮಿನಾಶಕ ಸಿಂಪಡಣೆಯ ನಂತರ ಗಿಡದಲ್ಲಿನ ಹೂವು ಉದುರಲು ಪ್ರಾರಂಭಿಸಿದೆ. ಅನಂತರ ಗಿಡಗಳು ಒಣಗಲು ಪ್ರಾರಂಭಿಸಿವೆ. ಕಂಪನಿಯ ಪ್ರಯೋಗದ ಚೆಲ್ಲಾಟಕ್ಕೆ ಒಂದು ಎಕರೆಯ ಟೊಮೆಟೊ ಬೆಳೆ ನಾಶವಾಗಿದ್ದು, ಸುಮಾರು 25 ಲಕ್ಷ ರೂ. ನಷ್ಟವಾಗಿದೆ'' ಎಂದು ರೈತ ಗಿಡ್ಡೇಗೌಡ ಹೇಳಿದ್ದಾರೆ.

''ದೊಂಬರಳ್ಳಿಯಲ್ಲಿ ಮಂಜುನಾಥ್​ ಎಂಬುವವರ ಸಂಪರ್ಕದಿಂದ ಇವರು ಬಂದರು. ಟ್ರಯಲ್ ಕೊಡುತ್ತೇವೆ. ಔಷಧಿಯನ್ನು ಫ್ರೀಯಾಗಿ ಕೊಡುತ್ತೇವೆ ಎಂದರು. ಆದರೆ ಗಿಡಕ್ಕೆ ಏನಾದ್ರು ತೊಂದ್ರೆಯಾದ್ರೆ ಎಂದೆ. ಅದಕ್ಕವರು ಏನೂ ಆಗಲ್ಲ ಎಂದರು. ಆಯ್ತು ಸರ್ ಸಿಂಪಡಣೆ ಮಾಡಿ ಎಂದೆ. ಸ್ವಲ್ಪ ಉಚಿತವಾಗಿ ಔಷಧಿ ಸಿಗುತ್ತೆ ಅಂತಾ ತಿಳಿದ ನಾನು, ಚೆನ್ನಾಗಿದ್ರೆ ಮಾತ್ರ ಹೊಡಿರಿ. ಇಲ್ಲಂದ್ರೆ ಬೇಡ ಎಂದೆ. ಏನೂ ತೊಂದರೆ ಆಗಲ್ಲ ಅಂತ ಔಷಧಿ ಹೊಡೆದ್ರು. ಈಗ ಈ ರೀತಿ ಆಗಿದೆ. ಗಿಡವೆಲ್ಲಾ ಒಣಗಿ, ಹೂವೆಲ್ಲಾ ಉದುರಿಕೊಂಡಿದೆ. ಅದಕ್ಕೆ ಈ ಬಗ್ಗೆ ಕಂಪ್ಲೇಂಟ್​ ಮಾಡಿದೆ. ಅದಕ್ಕೆ ಅವರು ನಾವು ಮ್ಯಾನೇಜರ್ ಕೇಳಿ ಹೇಳುತ್ತೇವೆ. ಬಾಸ್​ ಕೇಳಿ ಹೇಳುತ್ತೇವೆ ಎಂದರು. ಇಲ್ಲ ನಮಗೆ ನಂಬರ್ ಕೊಡಿ ನಾವೇ ಮಾತನಾಡುತ್ತೇವೆ ಎಂದಾಗ, ಕಳೆದ 20 ದಿನದಿಂದಲೂ ಇವತ್ತು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಸತಾಯಿಸಿದ್ದಾರೆ. ಈ ಬಗ್ಗೆ ಇವತ್ತು ಬೆಳಗ್ಗೆ ಮತ್ತೆ ಒತ್ತಾಯಿಸಿದ್ದಕ್ಕೆ ನೀವು ಏನ್​ ಬೇಕಾದ್ರು ಮಾಡ್ಕೊಳ್ಳಿ, ಕೇಸ್​ ಹಾಕೊಳ್ಳಿ ಎಂದಿದ್ದಾರೆ'' ಎಂದು ತಮಗಾದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

ಕಂಪನಿಗಳಿಗೆ ತಕ್ಕಪಾಠ ಕಲಿಸಲು ಹೋರಾಟದ ಎಚ್ಚರಿಕೆ:ಬಹುರಾಷ್ಟ್ರೀಯ ಕಂಪನಿಗಳ ಉದ್ದೇಶ ಕೇವಲ ಲಾಭ ಮಾಡುವುದಷ್ಟೇ. ತಮ್ಮ ಉತ್ಪನ್ನಗಳ ಪ್ರಯೋಗಕ್ಕೆ ಅಮಾಯಕ ರೈತರಿಗೆ ಆಮಿಷದ ಬಲೆ ಬೀಸಿ ವಂಚನೆ ಮಾಡುತ್ತಿದ್ದಾರೆ. ಕ್ರಿಮಿನಾಶಕ ಸಿಂಪರಣೆಯಿಂದ ಗಿಡಗಳು ಒಣಗಿರುವ ಬಗ್ಗೆ ಗಿಡ್ಡೇಗೌಡ ಕ್ರಿಮಿನಾಶಕ ಕಂಪನಿಯ ಪ್ರತಿನಿಧಿಯನ್ನ ಸಂಪರ್ಕಿಸಿದ್ದಾರೆ. ಆದರೆ, ಆತ ಬೇಕಾದ್ದು ಮಾಡಿಕೊಳ್ಳಿ ಎಂಬ ಉಡಾಫೆಯ ಮಾತನಾಡಿದ್ದಾನೆ. ರೈತರನ್ನು ವಂಚಿಸುತ್ತಿರುವ ಇಂತಹ ಕಂಪನಿಗಳಿಗೆ ತಕ್ಕಪಾಠ ಕಲಿಸಲು ಹೋರಾಟ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನ ರೈತ ಸಂಘ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಗುಣವಂತ್ ಮತ್ತು ಕೆವಿಕೆಯ ಕೃಷಿ ವಿಜ್ಞಾನಿಗಳ ತಂಡ ತೋಟಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಹೆವಿ ಡೋಸ್ ಕ್ರಿಮಿನಾಶಕ ಸಿಂಪಡಣೆಯಿಂದ ಟೊಮೆಟೊ ಗಿಡಗಳು ಒಣಗಿರುವ ಶಂಕೆ ಇದೆ. ಸ್ಯಾಂಪಲ್ ತೆಗೆದುಕೊಳ್ಳಲಾಗಿದ್ದು, ವರದಿಯ ನಂತರ ಕ್ರಮ ತೆಗೆದುಕೊಳ್ಳುವ ಭರವಸೆಯನ್ನ ನೀಡಿದ್ದಾರೆ.

ಇದನ್ನೂ ಓದಿ:ಟೊಮೆಟೊ ಬೆಳೆಗೆ ಬಂದೆರಗಿದ ರೋಗ.. ಭಾರಿ ಆದಾಯ ನಿರೀಕ್ಷೆಯಲ್ಲಿದ್ದ ಧಾರವಾಡ ರೈತನಿಗೆ ಆಘಾತ!

Last Updated : Aug 3, 2023, 1:13 PM IST

ABOUT THE AUTHOR

...view details