ದೊಡ್ಡಬಳ್ಳಾಪುರ : ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ 3 ದಿನಗಳಿಂದ ರೈತರಿಬ್ಬರು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹವನ್ನ ನಡೆಸುತ್ತಿದ್ದರು. ಉಪವಾಸ ನಿರತ ರೈತರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ನೀಡಿದರು. ಸಚಿವರ ಭರವಸೆಯ ಮೇರೆಗೆ ರೈತರು ಉಪವಾಸ ಅಂತ್ಯಗೊಳಿಸಿದ್ದಾರೆ.
ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ವಿಷ ಹರಿಸಿದ ಪಟ್ಟಣ ಮತ್ತು ನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹರಿದು ಹೋಗುವ ಅರ್ಕಾವತಿ ನದಿ ಪಾತ್ರದ ಕೆರೆಗಳು ಇಂದು ವಿಷವಾಗಿವೆ. ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯನಿಕ ನೀರು ಕೆರೆಗಳಿಗೆ ನೇರವಾಗಿ ಸೇರುತ್ತಿದೆ. ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಯಾದ ದೊಡ್ಡ ತುಮಕೂರು ಮತ್ತು ಚಿಕ್ಕತುಮಕೂರು ಕೆರೆಯ ನೀರು ಬಳಸಲು ಯೋಗ್ಯವಾಗಿಲ್ಲದಷ್ಟು ವಿಷವಾಗಿದೆ.
ದೊಡ್ಡತುಮಕೂರಿನ ಬೋರ್ವೆಲ್ ನೀರನ್ನು ಬಳಸುತ್ತಿರುವ ಜನರು ಈಗಾಗಲೇ ರೋಗಗಳಿಗೆ ತುತ್ತಾಗಿದ್ದಾರೆ. ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆಗಳಿಂದ ಬರುವ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿದ ನಂತರ ಕೆರೆಗಳಿಗೆ ಬಿಡುವಂತೆ ಒತ್ತಾಯಿಸಿ ಕಳೆದ 10 ವರ್ಷಗಳಿಂದ ಹೋರಾಟವನ್ನ ಗ್ರಾಮಸ್ಥರು ಮಾಡುತ್ತಿದ್ದಾರೆ.
ಕೆರೆಯ ಅಂಗಳದಲ್ಲಿ STP ಪ್ಲಾಂಟ್ ಮಾಡಿದ ದೊಡ್ಡಬಳ್ಳಾಪುರ ನಗರಸಭೆ: ದೊಡ್ಡಬಳ್ಳಾಪುರ ನಗರದಿಂದ ಒಳಚರಂಡಿಯ ಮೂಲಕ ಬರುವ ತ್ಯಾಜ್ಯದ ನೀರನ್ನು ಶುದ್ಧೀಕರಿಸಲು ಚಿಕ್ಕತುಮಕೂರು ಕೆರೆಯ ಅಂಗಳದಲ್ಲಿ STP ಪ್ಲಾಂಟ್ ಸ್ಥಾಪನೆ ಮಾಡಲಾಗಿದೆ. ಹಳೇ ಪದ್ದತಿಯಲ್ಲಿ ನಿರ್ಮಾಣ ಮಾಡಲಾಗಿರುವ STP ಪ್ಲಾಂಟ್ನಿಂದ ನೀರು ಶುದ್ಧೀಕರಣವಾಗುತ್ತಿಲ್ಲ. ವಿಷಕಾರಿ ವಸ್ತುಗಳು ನೇರವಾಗಿ ಕೆರೆಯ ಒಡಲು ಸೇರುತ್ತಿವೆ. STP ಪ್ಲಾಂಟ್ ನ ಸಾಮರ್ಥ್ಯ ಇರೋದು 2 ಎಂಎಲ್ಡಿ ನೀರನ್ನ ಶುದ್ಧೀಕರಿಸುವಷ್ಟು. ಆದರೆ STP ಪ್ಲಾಂಟ್ ಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ 16 MLD ಯಷ್ಟು. ಹೀಗಾಗಿ, ಈಗಿರುವ STP ಪ್ಲಾಂಟ್ ಗೆ ಒಂದು ದಿನದಲ್ಲಿ ಹರಿದು ಬರುವ ನೀರನ್ನ ಶುದ್ಧೀಕರಿಸಲು ಒಂದು ವಾರ ಸಮಯ ಬೇಕಾಗಿದೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ನೇರವಾಗಿ ಕೆರೆಯ ಒಡಲಿಗೆ: ದೊಡ್ಡಬಳ್ಳಾಪುರ ನಗರದಿಂದ ಬರುವ ತ್ಯಾಜ್ಯದ ನೀರನ್ನು ಶುದ್ಧೀಕರಿಸಲು ಹಳೆಯ ಪದ್ಧತಿಯ STP ಪ್ಲಾಂಟ್ ಇದೆ. ಆದರೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ನೀರನ್ನು ಶುದ್ದೀಕರಿಸಲು ಯಾವುದೇ ಶುದ್ದೀಕರಣ ಘಟಕವೇ ಇಲ್ಲ. ವಿಷಯುಕ್ತ ನೀರು ನೇರವಾಗಿ ಚಿಕ್ಕತುಮಕೂರು ಕೆರೆಯನ್ನ ಸೇರುತ್ತಿದೆ. ಕೆರೆಯ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಪ್ರಾಣಕ್ಕೆ ಕುತ್ತು ತರುವ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ವಿಷಯುಕ್ತ ನೀರು ಸೇವನೆ ಮಾಡಿದ ಜಲಚರಜೀವಿಗಳು ಮತ್ತು ಕುರಿ ಮೇಕೆಗಳು ಸಾವನ್ನಪ್ಪಿವೆ. ಸುತ್ತಮುತ್ತಲಿನ ಅಂತರ್ಜಲದ ನೀರು ಸಹ ವಿಷವಾಗಿದೆ. ಆರ್ ಓ ಫ್ಲಾಂಟ್ ಗಳಲ್ಲಿ ಶುದ್ಧೀಕರಿಸಿದ ನೀರಿನಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.