ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಯಾವುದೇ ಮಾಹಿತಿ ನೀಡದೆ ಜಮೀನುಗಳ ಮೇಲೆ 220 ಕೆ.ವಿ ಪವರ್‌ಲೈನ್ ಎಳೆಯಲು ಬಂದ ಕಾರ್ಮಿಕರನ್ನು ರೈತರು ತಡೆದು ಪ್ರತಿಭಟನೆ ನಡೆಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕೆಪಿಟಿಸಿಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಮೊದಲು ಪರಿಹಾರ ಕೊಡಿ, ನಂತರ ಕಾಮಗಾರಿ ನಡೆಸಿ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಪವರ್‌ಲೈನ್ ಎಳೆಯಲು ಬಂದಿದ್ದ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದಾರೆ.
ಖಾನೇಹೊಸಹಳ್ಳಿ ಗ್ರಾಮದ ಬಳಿ ಕೆಪಿಟಿಸಿಎಲ್ ವತಿಯಿಂದ 220 ಕೆ.ವಿ ಪವರ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಪವರ್‌ಲೈನ್ ಹಾದು ಹೋಗಿದ್ದು, ಇದೇ ಪವರ್ಲೈನ್ನಲ್ಲಿ ಹೆಚ್ಚುವರಿ ವಿದ್ಯುತ್ ಲೈನ್‌ಗಳನ್ನು ಹಾಕಲಾಗುತ್ತಿದೆ. ಇದರ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಖಾನೇಹೊಸಹಳ್ಳಿ ಗ್ರಾಮದ ಬಳಿ ಲೈನ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಕೆಪಿಟಿಸಿಎಲ್ ಅವರು ಏಕಾಏಕಿ ಜಮೀನಿನ ಮೇಲೆ ಪವರ್‌ಲೈನ್ ಎಳೆಯುತ್ತಿರುವುದಕ್ಕೆ ಮತ್ತು ಕಾಮಗಾರಿ ಬಗ್ಗೆ ಮಾಹಿತಿ ನೀಡದೇ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಟಿಸಿಎಲ್ ವಿರುದ್ಧ ರೈತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ರಂಗರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಪವರ್‌ಲೈನ್ ಅಳವಡಿಸಿದ್ದಾಗಲೂ ಯಾವುದೇ ಪರಿಹಾರ ಕೊಟ್ಟಿಲ್ಲ. ಈಗ ಹೆಚ್ಚುವರಿ ಪವರ್‌ಲೈನ್ ಅಳವಡಿಸುವಾಗಲೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು ಗಮನಹರಿಸಿ ಸರ್ಕಾರದಿಂದ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.