ನೆಲಮಂಗಲ: ಕೊರೊನಾ ಲಾಕ್‍ಡೌನ್ ಎಫೆಕ್ಟ್ನಿಂದಾಗಿ ಟೊಮ್ಯಾಟೊ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಚೆನ್ನಾಗಿ ಇದ್ದರೂ ಕೂಡ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಮನನೊಂದು ರೈತನೋರ್ವ ಬೆಳೆಗೆ ಬೆಂಕಿ ಹಚ್ಚಿರುವ ಘಟನೆ ನೆಲಮಂಗಲ ತಾಲೂಕಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಖಾಜಿಪಾಳ್ಯ ಹಾಗೂ ಕುತ್ತಿನಗೆರೆ ರೈತರು ಈ ಬಾರಿ ಹೆಚ್ಚು ಟೊಮೆಟೊ ಬೆಳೆದಿದ್ದಾರೆ. ಇದೀಗ ಟೊಮೆಟೊ ಕೆಜಿಗೆ 5 ರೂಪಾಯಿಯಂತೆ ರೈತರಿಂದ ಖರೀದಿಯಾದರೆ, 10 ರೂಪಾಯಿಗೆ ದಲ್ಲಾಳಿ ಮಾರುವಂತಾಗಿದೆ. ಇದರಿಂದ ಮನನೊಂದ ರೈತ ತನ್ನ 10 ಎಕರೆಯಲ್ಲಿನ ಟೊಮಟೊ ಬೆಳೆಗೆ ಬೆಂಕಿ ಹಚ್ಚಿದ್ದಾನೆ.
ಸೂಕ್ತ ಬೆಲೆಯಿಲ್ಲದೆ ಟೊಮೆಟೊ ಬೆಳೆಗೆ ಬೆಂಕಿ ಹಚ್ಚಿದ ರೈತ ಈ ಕುರಿತು ಮಾತನಾಡಿದ ರೈತ ಮರಿಗೌಡ, ಮೇ ತಿಂಗಳ ವೇಳೆಗೆ ವಿವಾಹ ಸಮಾರಂಭಗಳು ಇರುವುದರಿಂದ ಟೊಮೆಟೊ ಬೆಳೆಗೆ ಉತ್ತಮ ಬೆಲೆ ಸಿಗುವ ಭರವಸೆಯಲ್ಲಿ 10 ಎಕರೆ ಜಮೀನು ಭೋಗ್ಯಕ್ಕೆ ಪಡೆದು ಟೊಮೆಟೊ ಬೆಳೆದಿದ್ದೆ. ಆದರೀಗ ಕೊರೊನಾ ಲಾಕ್ಡೌನ್ನಿಂದಾಗಿ ಬೆಲೆಯಿಲ್ಲದಂತಾಗಿದೆ. ಹೀಗಾಗಿ ಬೆಳೆಗೆ ಬೆಂಕಿ ಹಚ್ಚಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ ರೈತರು, ಕೋವಿಡ್ ಸಂದರ್ಭದಲ್ಲಿ ನೇರವಾಗಿ ನಮ್ಮಿಂದ ಟೊಮೆಟೊ ಖರೀದಿಸಿ ಎಂದು ಮನವಿ ಮಾಡಿದ್ದಾರೆ.
ಓದಿ:''ಕೊಡುವ ಮೂರು ಸಾವಿರ ರೂಪಾಯಿಯಲ್ಲಿ ಬಾಡಿಗೆ ಕಟ್ಬೇಕಾ? ಬಡ್ಡಿ ಕಟ್ಬೇಕಾ? ಫೈನಾನ್ಸ್ ಕಟ್ಬೇಕಾ..?''