ನೆಲಮಂಗಲ : ಮಾಸ್ಕ್ ಧರಿಸುವ ಅವಕಾಶದ ಲಾಭ ಪಡೆದು ನಕಲಿ ಅಭ್ಯರ್ಥಿಯೊಬ್ಬ ಸಿವಿಲ್ ಕಾನ್ಸ್ಟೇಬಲ್ ಪರೀಕ್ಷೆಗೆ ಹಾಜರಾಗಿ ತಪಾಸಣೆ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಇಲ್ಲಿನ ಗಣೇಶನ ಗುಡಿ ಗ್ರಾಮದ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ನಡೆಸಲಾಯಿತು. ಈ ವೇಳೆ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿಯ ಅಭ್ಯರ್ಥಿ ಮಂಜುನಾಥ್ (21) ಹೆಸರಿನಲ್ಲಿ ನಕಲಿ ಅಭ್ಯರ್ಥಿಯು ಪರೀಕ್ಷೆಗೆ ಹಾಜರಾಗಿದ್ದನು.
ಮಾಸ್ಕ್ ಧರಿಸಿ ಬೇರೊಬ್ಬನ ಹೆಸರಲ್ಲಿ ಪರೀಕ್ಷೆಗೆ ಹಾಜರಾದ ನಕಲಿ ಅಭ್ಯರ್ಥಿ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗಾಗಿ ಬಂದ ಹೆಚ್ಚುವರಿ ಎಸ್ಪಿ ಲಕ್ಷ್ಮಿ ಗಣೇಶ್ ಮತ್ತು ಇನ್ಸ್ಪೆಕ್ಟರ್ ಶಿವಣ್ಣ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ನಕಲಿ ಅಭ್ಯರ್ಥಿಯು ಸಿಕ್ಕಿಬಿದ್ದಿದ್ದಾನೆ.
ಕೋಲಾರ ಜಿಲ್ಲೆಯ ತರನಹಳ್ಳಿಯ ಶಿವಪ್ರಸಾದ್ (28) ಸಿಕ್ಕಿಬಿದ್ದ ಯುವಕ. ಮಂಜುನಾಥ್ ಹೆಸರಲ್ಲಿ ಈತ ಪರೀಕ್ಷೆ ಬರೆಯುತ್ತಿದ್ದನು. ಕೊರೊನಾ ಹಿನ್ನೆಲೆ ಪರೀಕ್ಷಾರ್ಥಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿತ್ತು. ಈ ಹಿನ್ನೆಲೆ ಆತ ಮಾಸ್ಕ್ ಧರಿಸಿ ಮತ್ತೊಬ್ಬನ ಹೆಸರಲ್ಲಿ ಪರೀಕ್ಷೆ ಬರೆಯಲು ಮುಂದಾಗಿದ್ದನು. ಸದ್ಯ ನೆಲಮಂಗಲ ನಗರ ಪೊಲೀಸರು ನಕಲಿ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.