ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸತಿ ಶಾಲೆಗಳು ಹೊಸ ರೂಪ ಪಡೆಯುತ್ತಿವೆ. ಈ ಶಾಲೆಗಳು ಮಕ್ಕಳಿಗೆ ಕಲಿಕೆಯ ಜೊತೆಗೆ ಮಣ್ಣಿನ ನಂಟು ಬೆಳೆಸುವ ಜೀವ ವೈವಿಧ್ಯಮಯ ತಾಣವಾಗಿ ಬದಲಾಗುತ್ತಿದೆ. ಶಾಲೆಯ ವಿಶಾಲವಾದ ಜಾಗದಲ್ಲಿ ಮಕ್ಕಳ ಊಟಕ್ಕೆ ಬೇಕಾದ ತರಕಾರಿ, ಹಣ್ಣುಗಳನ್ನು ಮಕ್ಕಳೇ ಬೆಳೆಯುತ್ತಾರೆ. ಅಲ್ಲದೇ, ಮೀನು ಸಾಕಣಿಕೆ, ಜೇನು ಸಾಕಣಿಕೆಯ ಮೂಲಕ ಪೌಷ್ಠಿಕ ಆಹಾರವನ್ನು ಪಡೆಯುವ ವ್ಯವಸ್ಥೆಯನ್ನೂ ಮಾಡಿರುವುದು ವಿಶೇಷ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10 ವಸತಿ ಶಾಲೆಗಳಿವೆ. ಇದರಲ್ಲಿ 7 ವಸತಿ ಶಾಲೆಗಳು ಸ್ವಂತ ಕಟ್ಟಡ ಮತ್ತು 10 ಎಕರೆಗೂ ಹೆಚ್ಚು ವಿಶಾಲ ಜಾಗ ಹೊಂದಿವೆ. ಇದರಲ್ಲಿ, ಕಟ್ಟಡ ಮತ್ತು ಆಟದ ಮೈದಾನದ ಜಾಗವನ್ನು ಹೊರತುಪಡಿಸಿ ಮತ್ತಷ್ಟು ಜಾಗ ವ್ಯರ್ಥವಾಗಿ ಉಳಿಯುತ್ತಿತ್ತು. ಈ ಜಾಗದಲ್ಲಿ ವಸತಿ ಶಾಲೆಯ ಮಕ್ಕಳ ಕೈಯಿಂದ ಕೃಷಿ ಮಾಡಿಸುವ ಮೂಲಕ ಮಕ್ಕಳಿಗೆ ಬೇಕಾದ ಪೌಷ್ಠಿಕ ಆಹಾರವನ್ನು ಬೆಳೆಯುವ ಯೋಜನೆಯನ್ನು ಸಾಕಾರಗೊಳಿಸಿದವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಹನುಮಂತರಾಯಪ್ಪ.
ಪ್ರಾಯೋಗಿಕವಾಗಿ ದೇವನಹಳ್ಳಿ ತಾಲೂಕಿನ ಕುಂದಾಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಮ್ಮ ಕನಸಿನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವ ಅವರು, 16 ಎಕರೆ ವಿಸ್ತೀರ್ಣದ ಜಾಗದಲ್ಲಿ ಮಾವು, ಸೀಬೆ, ಸ್ಟಾರ್ ಫ್ರೂಟ್, ಹಲಸು ಸೇರಿದಂತೆ 13 ಜಾತಿಯ 1250 ಹಣ್ಣಿನ ಗಿಡಗಳನ್ನು ನೆಡಿಸಿದ್ದಾರೆ. ವಿಶೇಷವಾಗಿ ಕಸಿ ಮಾಡಲಾದ ಗಿಡಗಳನ್ನು ಇಲ್ಲಿ ನೆಡಲಾಗಿದ್ದು,ಮಕ್ಕಳಿಗೆ ಗಿಡಗಳನ್ನು ದತ್ತು ನೀಡುವ ಯೋಜನೆಯೂ ಇದೆ.