ಆನೇಕಲ್(ಬೆಂಗಳೂರು):ಅಕ್ಟೋಬರ್ 25ರಂದು ಸರ್ಜಾಪುರ-ಚಿಕ್ಕತಿರುಪತಿ ಮುಖ್ಯರಸ್ತೆಯ ಮುಗಳೂರು ದಕ್ಷಿಣ ಪಿನಾಕಿನಿ ನದಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ತನಿಖೆಯನ್ನು ಸರ್ಜಾಪುರ ಪೊಲೀಸರು ಯಶಸ್ವಿಯಾಗಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರೇಮಕ್ಕಾಗಿ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಈ ಹತ್ಯೆ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಜಿಮ್ ಟ್ರೈನರ್ ಚೇತನ್ ಎಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿ ಶೋಭಾ ಎಂಬಾಕೆ ಕೆ.ಆರ್.ಪುರಂನ ಟಿ.ಸಿ.ಪಾಳ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಜಿಮ್ ಟ್ರೈನರ್ ಆಗಿದ್ದ ಚೇತನ್ ಜೊತೆಗಿನ ಪರಿಚಯ ಪ್ರೀತಿಗೆ ತಿರುಗಿತ್ತು. ಈ ನಡುವೆ ಚೇತನ್, ಶೋಭಾಳಿಗೆ ತನ್ನ ಸ್ನೇಹಿತ ಫೈನಾನ್ಸ್ ನಡೆಸುತ್ತಿದ್ದ ಸತೀಶನನ್ನು ಪರಿಚಯಿಸಿದ್ದಾನೆ. ಇದಾದ ಬಳಿಕ ಸತೀಶ್ನೊಂದಿಗೆ ಶೋಭಾ ಸಲುಗೆ ಬೆಳೆಸಿಕೊಂಡಿದ್ದಳು. ನಂತರದ ದಿನಗಳಲ್ಲಿ ಸತೀಶನಿಂದ ಹಣ ಪಡೆದ ಶೋಭಾ, ಚೇತನ್ನಿಂದ ಅಂತರ ಕಾಯ್ದುಕೊಂಡಿದ್ದಳು. ಇತ್ತ ಇಬ್ಬರ ಪ್ರೇಮದ ವಿಷಯ ತಿಳಿದ ಚೇತನ್, ಶೋಭಾ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದನು ಎನ್ನಲಾಗಿದೆ. ಇದೇ ಭಯದಲ್ಲಿದ್ದ ಶೋಭಾ, ಸತೀಶ್ ಮತ್ತು ಶಶಿ ಎಂಬ ಯುವಕನ ಸಹಾಯದಿಂದ ಮೂವರೂ ಸೇರಿ ಚೇತನ್‌ನನ್ನು ಕೊಲೆ ಮಾಡಿದ್ದರು.
ದಕ್ಷಿಣ ಪಿನಾಕಿನಿ ನದಿಯಲ್ಲಿ ಚೇತನ್ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಸರ್ಜಾಪುರ ಪೊಲೀಸರಿಗೆ ಸಿಕ್ಕಿತ್ತು. ಆಗ ಚೇತನ್ ಗುರುತು ವಿವರ ಸಿಕ್ಕಿರಲಿಲ್ಲ. ಆದರೆ, ಶವದ ಗುರುತು ಪತ್ತೆ ಹಚ್ಚಲು ಪೊಲೀಸರು ಸಾರ್ವಜನಿಕ ನೋಟಿಸ್ ಹೊರಡಿಸಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 24ರಂದು ಹುಟ್ಟುಹಬ್ಬ ಆಚರಣೆಗೆ ಹೋದ ಮಗ ಮನೆಗೆ ಬಂದಿಲ್ಲ ಎಂದು ಪೋಷಕರು ಮಿಸ್ಸಿಂಗ್ ದೂರು ದಾಖಲಿಸಿದ್ದರು.