ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಮೇಲ್ಸೇತುವೆ ತಡಗೋಡೆ ಕುಸಿತದ ಕುರಿತು 'ಈಟಿವಿ ಭಾರತ್' ಮಾಡಿದ್ದ ವರದಿಯಿಂದ ಎಚ್ಚೆತ್ತ ಶಾಸಕ ಟಿ.ವೆಂಕಟರಮಣಯ್ಯ ಅವರು ತಂಗಿದ್ದ ರೆಸಾರ್ಟ್ನಿಂದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಯಲಹಂಕ - ಹಿಂದೂಪುರ ರಾಜ್ಯ ಹೆದ್ದಾರಿಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರೈಲ್ವೆ ಗೇಟ್ ಬಳಿಯ ಮೇಲ್ಸೇತುವೆ ತಡಗೋಡೆ ಶುಕ್ರವಾರ ಕುಸಿತಗೊಂಡಿತ್ತು. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.
ಆರು ತಿಂಗಳಲ್ಲಿ ಎರಡು ಬಾರಿ ಕುಸಿದ ಮೇಲ್ಸೇತುವೆ: ಸಾರ್ವಜನಿಕರಲ್ಲಿ ಆತಂಕ
ರಾಜ್ಯದಲ್ಲಿ ಜರುಗುತ್ತಿರುವ ಕ್ಷೀಪ್ರ ರಾಜಕೀಯ ಬೆಳವಣಿಗೆಗಳಿಂದ ಮೂರು ಪಕ್ಷಗಳ ಶಾಸಕರು ರೆಸಾರ್ಟ್ ಮೊರೆ ಹೋಗಿದ್ದಾರೆ. ಶಾಸಕ ಟಿ.ವೆಂಕಟರಮಣಯ್ಯ ಅವರು ಸಹ ಯಶವಂತಪುರದ ತಾಜ್ ವಿವಾಂತಾ ಹೋಟೆಲ್ನಲ್ಲಿ ತಂಗಿದ್ದರು. ಮೇಲ್ಸೇತುವೆ ತಡೆಗೋಡೆ ವಿಷಯ ತಿಳಿಯುತ್ತಿದ್ದಂತೆ ವೆಂಕಟರಮಣಯ್ಯ ಅವರು ಹೋಟೆಲ್ನಿಂದ ನೇರವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಕಳಪೆ ಕಾಮಗಾರಿಯಿಂದ ಮೇಲ್ಸೇತುವೆ ಕುಸಿದಿದೆ ಅನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಟಿ.ವೆಂಕಟರಮಣಯ್ಯ, ಈ ಕುರಿತು ಕೆಆರ್ಡಿಎಲ್ ಮತ್ತು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಸೇತುವೆ ನಿರ್ಮಾಣ ಆಗಿರುವುದು ರೈಲ್ವೆ ಇಲಾಖೆಯಿಂದ ಎಂದು ಹೇಳಿದರು.
ಮೇಲ್ಸೇತುವೆ ನಿರ್ಮಾಣದ ವೇಳೆ ಹಾದುಹೋಗಿದ್ದ ಹೈಟೆಂಕ್ಷನ್ ವಿದ್ಯುತ್ ಮಾರ್ಗ ತೆರವುಗೊಳಿಸುವುದೇ ಸವಾಲಾಗಿತ್ತು. ಇದೇ ಕಾರಣಕ್ಕೆ ಮೇಲ್ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಸಮಯದಲ್ಲಿ ಮಳೆ ನೀರು ಸಂಗ್ರಹಗೊಂಡು ತಡಗೋಡೆಗಳು ಹಗುರಗೊಂಡಿರಬಹುದು. ಆದ್ದರಿಂದ ಕಳಚಿ ಬಿದ್ದಿರುವ ಸಾಧ್ಯತೆ ಇದೆ. ದುರುಸ್ತಿ ಮಾಡಬೇಕಾದ ಹಿನ್ನೆಲೆ ಎರಡು ತಿಂಗಳು ಮೇಲ್ಸೇತುವೆಯಲ್ಲಿ ವಾಹನ ಸಂಚಾರ ರದ್ದುಗೊಳಿಸಲಾಗಿದೆ ಎಂದು ಹೇಳಿದರು.