ಬೆಂಗಳೂರು/ಆನೇಕಲ್: ಈಗಿರುವ ರಾಜಕೀಯ ಪಕ್ಷಗಳು ಯುವಕರ ಶ್ರಮಕ್ಕೆ, ಆಶಯಗಳಿಗೆ ತಕ್ಕ ಉದ್ಯೋಗ ನೀಡುತ್ತಿಲ್ಲ. ಕರೆದ 4,500 ಉದ್ಯೋಗಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅರ್ಜಿಗಳು ಹರಿದು ಬರುತ್ತಿವೆ. ಇದರಿಂದ ದೇಶದ ಪ್ರಗತಿ ಹೇಗೆ ಸಾಧ್ಯ ಎಂದು ಪ್ರಗತಿಪರ ಹೋರಾಟಗಾರ ರವಿಕೃಷ್ಣಾರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಇರುವ 3 ಜೆಸಿಬಿ (ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ) ಪಕ್ಷಗಳು ದೇಶದ ಯುವಜನತೆಯ ಹಿತ ಮರೆತಿವೆ. ಹಣ, ಹೆಂಡ ಆಮಿಷದ ಮತ್ತಿನಲ್ಲಿ ತೇಲಿಸುತ್ತಾ ದುರಾಡಳಿತ, ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಆರೋಪಿಸಿದರು.
ನಿಷ್ಪಕ್ಷಪಾತವಾದ, ಜನಪರವಾದ, ಸಮಾಜ ಪರವಾದ ಪಕ್ಷವೊಂದು ಇವಕ್ಕೆ ಪರ್ಯಾಯವಾಗಿ ಕಟ್ಟಬೇಕಿದೆ. ಹೀಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಎಂಬ ಪಕ್ಷ ನೋಂದಣಿಯಾಗಲಿದೆ. ಇದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ದಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಜನಪರ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ಥಾಪನೆ: ರವಿಕೃಷ್ಣಾರೆಡ್ಡಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ನ ಜಾಣಗೆರೆ ರಘು ಅವರನ್ನು ಉಮೇದುದಾರರನ್ನಾಗಿಸಿದೆ. ನಾಳೆ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇವೆ. ಆನೇಕಲ್, ಬೆಂಗಳೂರು ದಕ್ಷಿಣದ ಭ್ರಷ್ಟಾಚಾರ ಬೇಡವೆನ್ನುವ ನಾಗರಿಕ ಮತದಾರರು ಬೆಂಬಲಿತರಾಗಿ ಆಗಮಿಸಬೇಕೆಂದು ರವಿಕೃಷ್ಣಾರೆಡ್ಡಿ ಕೋರಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಧಿಕೃತ ಘೋಷಣೆಗೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದ ಚುನಾವಣೆಗಳಲ್ಲಿ ನಿರ್ಭೀತಿಯ ರಾಜಕಾರಣಕ್ಕಾಗಿ ಯುವ ಸಮೂಹದ ಆಗಮನಕ್ಕೆ ಪಕ್ಷ ತನ್ನ ಬಾಗಿಲು ತೆರೆದಿಟ್ಟಿದೆ. ಆಸಕ್ತರು 9986499551 ಸಂಖ್ಯೆಗೆ ಕರೆ ಮಾಡುವಂತೆ ರವಿಕೃಷ್ಣಾರೆಡ್ಡಿ ತಿಳಿಸಿದರು.