ಆನೇಕಲ್: ಇಲ್ಲಿಯ ಹೆನ್ನಾಗರ ಬೃಹತ್ ಕೆರೆಯ ಅಂಗಳವನ್ನು ಒತ್ತುವರಿ ಮಾಡಿ ಇಡೀ ಕೆರೆಯ ಜಾಗವನ್ನು ಅಕ್ರಮವಾಗಿ ಕಬಳಿಸುತ್ತಿರುವ ವರದಿ ಹೊರ ಬೀಳುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ನಗರ ಜಿಲ್ಲಾಡಳಿತ ತಂತಿ ಬೇಲಿ ಹಾಕುವ ಮೂಲಕ ಕೆರೆಯ ಪ್ರವೇಶಕ್ಕೆ ತಡೆಯೊಡ್ಡಿದೆ. ಮಣ್ಣು ಕಸ ತುಂಬುವ ಮೂಲಕ ಕೆರೆ ದಡವನ್ನು ಕಬಳಿಸುತ್ತಿರುವ ಕುರಿತು ಸಾರ್ವಜನಿಕರಿಂದ ಕೇಳಿಬಂದ ದೂರಿನನ್ವಯ ಜಿಲ್ಲಾಡಳಿತವು ತಹಶೀಲ್ದಾರ್ ಶಿವಪ್ಪ ಹೆಚ್ ಲಮಾಣಿ ಮೂಲಕ ಕ್ರಮಕ್ಕೆ ಮುಂದಾಗಿದೆ.
ಖಾಸಗಿ ಕಂಪನಿಗಳು ಒತ್ತುವರಿ ಕುರಿತು ಮೊಬೈಲ್ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್ ಕೂಡ ಆಗಿದ್ದವು. ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಮತ್ತು ಕಬ್ಬಿಣದ ಸರಳುಗಳನ್ನು ಹಾಕಿ ಯಾವುದೇ ವಾಹನ ಪ್ರವೇಶ ಮಾಡದಂತೆ ಕೆರೆಗೆ ನಿರ್ಬಂಧ ವಿಧಿಸಲಾಗಿದೆ. ಲಾರಿಗಳಲ್ಲಿ ಮಣ್ಣನ್ನು ಕೆರೆಗೆ ಕೊಂಡೊಯ್ದು ಅಲ್ಲಿಯೇ ಮುಚ್ಚಲು ಮಾಡುತ್ತಿದ್ದ ಯತ್ನವನ್ನು ತಡೆಯುವ ಮುಖಾಂತರ ಕೆರೆಯನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಮುಂದಾಗಿದೆ.
ಕರ್ಪೂರು ಕೆರೆ ಮಣ್ಣು ಬಳಕೆಗೆ ವಿರೋಧ: ಇಲ್ಲಿಯ ಅತ್ತಿಬೆಲೆ ಮುಖ್ಯರಸ್ತೆಯಲ್ಲಿನ ಕರ್ಪೂರು ಕೆರೆ 80 ಎಕರೆ ಜಾಗವನ್ನು ವಿಸ್ತರಿಸಿಕೊಂಡಿದೆ. ಬೆಂಗಳೂರು-ಆನೇಕಲ್ ಮತ್ತು ಹೊಸೂರು ರೈಲ್ವೇ ಮಾರ್ಗ ದ್ವಿಪಥವಾಗಿ ಕಾಮಗಾರಿ ಭರದಿಂದ ಸಾಗುತ್ತಿರುವುದರಿಂದ ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯು ಕೆರೆ ಮಣ್ಣನ್ನು ಬಳಸಿಕೊಳ್ಳಲು ಖಾಸಗಿ ಸಂಸ್ಥೆಯೊಂದಕ್ಕೆ ಅನುಮತಿ ನೀಡಿದೆ. ನಿಯಮಾನುಸಾರ ಮೂರು ಅಡಿವರೆಗೆ ಮಾತ್ರ ಮಣ್ಣು ತೆಗೆಯಲು ಅನುಮತಿ ಕೊಟ್ಟಿದ್ದರೂ ಹೆಚ್ಚಿನ ಆಳ ಕೊರೆಯಲಾಗಿದೆ. ಇದರಿಂದ ಕೆರೆಯ ರೂಪ ವಿರೂಪಗೊಳ್ಳುತ್ತಿದೆ, ಅಲ್ಲದೆ ಕೆರೆಯಲ್ಲಿದ್ದ ಮರಗಳನ್ನೂ ಕಡಿಯಲಾಗುತ್ತಿದೆ ಎಂದು ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ. ಈ ಕುರಿತು ಕರ್ಪೂರು ಗ್ರಾಮ ಪಂಚಾಯಿತಿಯ ಗಮನಕ್ಕೆ ಬಂದಿದ್ದು, ಗ್ರಾ. ಪಂ ಅಧ್ಯಕ್ಷ ರಾಮು ಗೌಡ ಇಲಾಖೆಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹಿಂದಿನ ಘಟನೆ:ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೋಲಾರ ಡಿಎಫ್ಒ ನೇತೃತ್ವದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಈ ವೇಳೆ ಹೊಗಳಗೆರೆ ಅರಣ್ಯ ಪ್ರದೇಶಕ್ಕೆ ಸೇರಿದ ಸುಮಾರು 120 ಎಕರೆ ಒತ್ತುವರಿ ತೆರವು ಮಾಡಿ, ಅರಣ್ಯ ಇಲಾಖೆ ವಶಕ್ಕೆ ಪಡೆದಿತ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಕೊಡುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್